ರಾಯಚೂರು: ಸುಗಮ ಸಂಚಾರಕ್ಕೆ ಅಡ್ಡಿಯಾಗುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ಆದೇಶದ ಮೇರೆಗೆ ನಗರದ ಹೃದಯಭಾಗದಲ್ಲಿರುವ ಈರಣ್ಣ ಸರ್ಕಲ್ ನಲ್ಲಿನ ಮಾರುಕಟ್ಟೆಯನ್ನು ಪೊಲೀಸರು ರಾತ್ರೋರಾತ್ರಿ ತೆರವುಗೊಳಿಸಿದ್ದು, ವ್ಯಾಪಾರಿಗಳು ಕಂಗಾಲಾಗಿದ್ದಾರೆ.
ಜಿಲ್ಲಾಡಳಿತದ ಆದೇಶ ಎಂಬ ಕಾರಣಕ್ಕೆ 2 ಗಂಟೆ ಸುಮಾರಿಗೆ ಪೊಲೀಸರು ಮಾರುಕಟ್ಟೆ ತೆರವುಗೊಳಿಸಿದ್ದಾರೆ.
ಸದರಿ ಮಾರುಕಟ್ಟೆಯಲ್ಲಿ ರೈತರು ಗ್ರಾಮಗಳಿಂದ ತರಕಾರಿ ಬೆಳೆದು ರಾತ್ರಿಯೇ ತಂದು ಹೋಲ್ ಸೇಲ್ ನಲ್ಲಿ ಮಾರಾಟ ಮಾಡುತ್ತಾರೆ.
ಆದರೆ ಮಾರುಕಟ್ಟೆ ತೆರವಿನ ಅರಿವಿಲ್ಲದ ರೈತರು ಇಂದು ಸಹ ಮಾರಾಟಕ್ಕೆ ತರಕಾರಿ ತಂದಿದ್ದು, ಮಾರಾಟ ಮಾಡಲು ಸಾಧ್ಯವಾಗದೇ ಕಂಗಾಲಾಗಿದ್ದಾರೆ.
ಬೆಳಗ್ಗೆ ತರಕಾರಿ ಕೊಳ್ಳಲು ಬಂದವರಿಗೂ ಮಾರುಕಟ್ಟೆ ಇಲ್ಲದಿರುವುದು ಶಾಕ್ ಉಂಟಾಗಿದೆ.
ಈ ಕುರಿತು ಮಾತನಾಡಿದ ತರಕಾರಿ ವ್ಯಾಪಾರಿ ಪದ್ಮ, ಕೊರೋನಾ ಬಂದು ಹೋದ ನಂತರ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದೆವು. ಇದೀಗ ದಿಢೀರ್ ಎಂದು ಮಾರುಕಟ್ಟೆ ತೆರವುಗೊಳಿಸಿರುವುದು ಯಾಕೆ ? ಎಂದು ಪ್ರಶ್ನಿಸಿದ್ದಾರೆ.