ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ, ಜಮೀನುಗಳು ಮತ್ತು ನಾಲೆಯ ಏರಿ ಮೇಲೆ ಸಂಚರಿಸಿ ಪರಿಶೀಲನೆ.
ಹೊಸೂರು : ನಾಲೆಯ ಕೊನೆ ಹಂತದ ಜಮೀನುಗಳಿಗೆ ಸರಾಗವಾಗಿ ನೀರು ಹರಿಸಬೇಕೆಂಬ ಕಾರಣದಿಂದ ಸರ್ಕಾರ ಪ್ರತಿ ವರ್ಷ ನಾಲೆಯ ಸ್ವಚ್ಚತೆ ಮತ್ತು ತ್ವರಿತ ಕಾಮಗಾರಿಗಾಗಿ ಹಣ ಬಿಡುಗಡೆ ಮಾಡುತ್ತಾ ಬಂದಿದೆ, ಈ ಬಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೊನೆಯ ಹಂತದ ರೈತರ ಜಮೀನಿಗೆ ನೀರು ಹರಿಸಲು ಸಾಧ್ಯವಾಗಿಲ್ಲ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕಿನ ಸೌತನಹಳ್ಳಿ, ಕಾಮೇನಹಳ್ಳಿ ಮತ್ತು ಹೊಸೂರುಕಲ್ಲಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ರೈತರ ಅಹವಾಲು ಆಲಿಸಿ, ಜಮೀನುಗಳು ಮತ್ತು ನಾಲೆಯ ಏರಿ ಮೇಲೆ ಸಂಚರಿಸಿ ಪರಿಶೀಲನೆ ನಡೆಸಿದ ಶಾಸಕರು ಸರ್ಕಾರದಿಂದ ೯೦ ಲಕ್ಷದಷ್ಟು ಹಣ ಬಿಡುಗಡೆಯಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಗುತ್ತಿಗೆದಾರರಿಂದ ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಮಗಾರಿ ಮಾಡಿಸಿಲ್ಲ ಎಂದರು.
ವಿಧಾನ ಸಭೆಯ ಚುನಾವಣೆಗೂ ಮುನ್ನ ಸರ್ಕಾರ ಅನುದಾನ ಬಿಡುಗಡೆ ಮಾಡಿದ್ದು ನೀರಾವರಿ ಇಲಾಖೆ ವತಿಯಿಂದ ನಾಲೆಗಳ ಸ್ವಚ್ಚತೆ ಮತ್ತು ದುರಸ್ಥಿ ಕಾಮಗಾರಿಗಾಗಿ ಟೆಂಡರ್ ಕರೆಯಲಾಗಿತ್ತು ಎಂದು ಮಾಹಿತಿ ನೀಡಿದ ಶಾಸಕ ಡಿ.ರವಿಶಂಕರ್ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ ಅಧಿಕಾರಿಗಳು ಕಾಮಗಾರಿಯನ್ನು ಸಮಪರ್ಕವಾಗಿ ಮಾಡಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹೊಸೂರುಕಲ್ಲಹಳ್ಳಿ, ಕಾಮೇನಹಳ್ಳಿ, ಸಾತಿಗ್ರಾಮ, ಸೌತನಹಳ್ಳಿ ಸೇರಿದಂತೆ ನಾಲೆಯ ಕೊನೆ ಹಂತದ ಹಲವು ಗ್ರಾಮಗಳಿಗೆ ಈವರೆಗೂ ನಾಲೆಯ ನೀರು ತಲುಪಿಲ್ಲ ಇದರಿಂದ ರೈತರು ಭತ್ತ ನಾಟಿ ಮಾಡಲು ಸಿದ್ದತೆ ಮಾಡಿಕೊಳ್ಳಲು ಆಗುತ್ತಿಲ್ಲ, ಉತ್ತಮ ಮಳೆಗಾಲ ಆದ ಸಂದರ್ಭದಲ್ಲಿ ಮಳೆ ನೀರಿನಿಂದ ನಾಲೆ ಮತ್ತು ಕೊಲ್ಲಿಗಳು ತುಂಬಿ ಹರಿಯುತ್ತಿದ್ದವು ಈ ಬಾರಿ ಮಳೆಯಾಗದ ಕಾರಣ ನಾಲೆಯ ನೀರನ್ನು ಆಶ್ರಯಿಸಿರುವ ರೈತರಿಗೆ ಅಧಿಕಾರಿಗಳ ಬೇಜವಾಬ್ದಾರಿಯಿಂದ ಅನಾನುಕೂಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಳೆಯಾಗದಿದ್ದರೂ ಕೊನೆ ಹಂತದ ರೈತರ ಜಮೀನಿಗೂ ಸರಾಗವಾಗಿ ನೀರು ಹರಿಯಬೇಕು ಈ ಬಗ್ಗೆ ಆಗಬೇಕಾದ ಕಾಮಗಾರಿಗಳನ್ನು ಮಾಡಿಸಬೇಕು ಎಂದು ಜೂನ್ ಮೊದಲ ವಾರದಲ್ಲಿ ನಡೆದ ನೀರಾವರಿ ಇಲಾಖೆ ಮತ್ತು ರೈತ ಮುಖಂಡರ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಆದರೂ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಇದರಿಂದ ರೈತರಿಗೆ ತೊಂದರೆಯಾಗಿದೆ ಎಂದರು.
ಈ ಸಂದರ್ಭದಲ್ಲಿ ಹಾಜರಿದ್ದ ರೈತ ಮುಖಂಡರು ಮತ್ತು ಗ್ರಾಮಸ್ಥರು ನಾಲೆ ನಿರ್ಮಾಣಗೊಂಡಾಗಿನಿಂದಲೂ ಈ ಸಮಸ್ಯೆಯನ್ನು ಕೊನೆ ಹಂತದ ರೈತರು ಅನುಭವಿಸುತ್ತಿದ್ದಾರೆ ಇದಕ್ಕೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಈವರೆಗೆ ಶಾಸಕರಾದವರಿಗೆ ಮತ್ತು ಇಲಾಖಾ ಅಧಿಕಾರಿಗಳಿಗೆ ದೂರು ನೀಡುತ್ತಿದ್ದರೂ ಉಪಯೋಗಕ್ಕೆ ಬಂದಿಲ್ಲ ಈ ವಿಚಾರವನ್ನು ತಾವು ಗಂಭೀರವಾಗಿ ತೆಗೆದುಕೊಂಡು ಸೂಕ್ತ ಪರಿಹಾರ ಒದಗಿಸಬೇಕು ಎಂದು ಶಾಸಕ ಡಿ.ರವಿಶಂಕರ್‌ರವರಿಗೆ ಮನವಿ ಸಲ್ಲಿಸಿದರು.
ನೀರಾವರಿ ಇಲಾಖೆಯ ಇಇ ಈರಣ್ಣನಾಯಕ, ಎಇಇ ಗುರುರಾಜ್, ಇಂಜಿನಿಯರ್ ಅಯಾಜ್‌ಪಾಷ ರೈತ ಮುಖಂಡರಾದ ವಿಶ್ವಾಸ್, ರಾಜನಾಯಕ, ನಂದೀಶ್, ಮೋಹನ್‌ಕುಮಾರ್, ಬಸವರಾಜು, ತಮ್ಮಯ್ಯ, ಸ್ವಾಮಿನಾಯಕ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.