Saturday, April 19, 2025
Google search engine

Homeಸ್ಥಳೀಯಮುಡಾ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ ​ಗಳೇ ಹೆಚ್ಚಿರುತ್ತಿತ್ತು: ಎಸ್.ಟಿ.ಸೋಮಶೇಖರ್

ಮುಡಾ ಪ್ರತಿ ಸಭೆಯಲ್ಲೂ ಶಾಸಕರ ಫೈಲ್ ​ಗಳೇ ಹೆಚ್ಚಿರುತ್ತಿತ್ತು: ಎಸ್.ಟಿ.ಸೋಮಶೇಖರ್

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆಯುತ್ತಿದ್ದ ಪ್ರತಿ ಸಭೆಯಲ್ಲೂ ಸ್ಥಳೀಯ ಶಾಸಕರ ಫೈಲ್ ​ಗಳೇ ಹೆಚ್ಚಾಗಿರುತ್ತಿದ್ದವು. ಇದರ ಜೊತೆಗೆ ಈ ಫೈಲ್​ಗಳ ಬಗ್ಗೆ ಯಾವುದೇ ಸೂಕ್ತ ಚರ್ಚೆಯಾಗದೇ ಪಾಸ್​ ಆಗುತ್ತಿದ್ದವು ಎಂದು ಹಾಲಿ ಶಾಸಕ ಹಾಗೂ ಮೈಸೂರಿನ ಮಾಜಿ ಉಸ್ತುವಾರಿ ಸಚಿವರೂ ಆಗಿದ್ದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.

ಈ ಬಗ್ಗೆ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ಸಭೆಯ ಬಹುತೇಕ ಸಬ್ಜೆಕ್ಟ್​ಗಳು ಶಾಸಕರುಗಳಿಗೆ ಸೇರಿದ್ದವು. ಮುಡಾ ಸದಸ್ಯರಾಗಲು ಬೇರೆ ಜಿಲ್ಲೆಯ ಪರಿಷತ್ ಸದಸ್ಯರೂ ತಮ್ಮ ವಾಸ ಸ್ಥಳವನ್ನು ಮೈಸೂರು ಎಂದೇ ತೋರಿಸುತ್ತಾರೆ. ಈ ಮಟ್ಟಕ್ಕೆ ಇಲ್ಲಿಯ ಶಾಸಕರು ಲಾಬಿ ಮಾಡುತ್ತಾರೆ ಎಂದು ದೂರಿದರು.

ಮುಡಾ ಇರುವುದು ಜನಸಾಮಾನ್ಯರ ಅಭಿವೃದ್ಧಿಗೋಸ್ಕರ. ಆದರೆ ಇಲ್ಲಿ ನಡೆಯುತ್ತಿರುವುದೇನು ಎಂದು ಪ್ರಶ್ನಿಸಿದ ಅವರು, ಈ ಬೋರ್ಡ್ ವ್ಯವಸ್ಥೆ ಬದಲಾಗಬೇಕು ಎಂದು ಆಗ್ರಹಿಸಿದರು.

ನಾನು ಇಲ್ಲಿ ಅಧಿಕಾರದಲ್ಲಿರುವಾಗಲೇ ಭ್ರಷ್ಟಾಚಾರ ನಡೆದಿತ್ತು. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಪತ್ರ ಬರೆದು ಆಯುಕ್ತರ ಬದಲಾವಣೆಗೆ ಯತ್ನಿಸಿದ್ದೆ. ಆದರೆ ಸರಕಾರದ ಕೆಲವರು ಜಾತಿ ಕಾರಣಕ್ಕೆ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದರು. ಆಯುಕ್ತರೂ ಕೋರ್ಟ್​ಗೆ ಹೋಗಿ ಅಧಿಕಾರ ಉಳಿಸಿಕೊಂಡಿದ್ದರು.

ನನ್ನ ಹೆಸರಿನಲ್ಲಿ ಅಥವಾ ಬೇನಾಮಿ ಹೆಸರಿನಲ್ಲಿ ಮುಡಾದಿಂದ ಒಂದೇ ಒಂದು ನಿವೇಶನ ಪಡೆದಿದ್ದರೂ ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ. ನಾನು ನಿವೇಶನ ತೆಗದುಕೊಂಡಿಲ್ಲ. ಅಲ್ಲದೇ ಅಧಿಕಾರಿಗಳಿಗೆ ಒತ್ತಡ ಹೇರಿ ಯಾರಿಗೂ ನಿವೇಶನವನ್ನೂ ಕೊಡಿಸಿಲ್ಲ. ಅನಗತ್ಯವಾಗಿ ಈ ವಿಚಾರದಲ್ಲಿ ನನ್ನ ಹೆಸರು ತರಬೇಡಿ ಎಂದರು.

ನಾನು ಉಸ್ತುವಾರಿ ಸಚಿವನಾಗಿದ್ದಾಗ ಈ ಅವ್ಯವಹಾರ ಗಮನಕ್ಕೆ ಬಂದಿತ್ತು. ಆಯುಕ್ತರು ಸಭೆ ಮಾಡದೇ ಸೈಟ್​ಗಳನ್ನು ನೀಡಿದ್ದಾರೆ. 50:50 ಅನುಪಾತದಡಿ ನಿವೇಶನ ಕೊಡುವಾಗ ಸಭೆಗೆ ಚರ್ಚೆಗೆ ತಂದುಕೊಡಬೇಕು. ಇದ್ಯಾವಾ ನಿಯಮಗಳನ್ನೂ ಅಂದಿನ ಆಯುಕ್ತರು ಅನುಸರಿಸಿಲ್ಲ. ಹೀಗಾಗಿ ಆಯುಕ್ತರನ್ನು ಬದಲಾಯಿಸುವಂತೆ ಸರಕಾರಕ್ಕೆ ಹೇಳಿದ್ದೆ. ಆದರೆ ಜಾತಿಯ ಪ್ರಭಾವದಿಂದ ಅವರು ಅಧಿಕಾರದಲ್ಲಿ ಮುಂದುವರೆಯುವಂತಾಯಿತು. ಅವತ್ತೇ ಸರಿಯಾದ ಕ್ರಮ ಆಗಿದ್ದರೆ ಇವತ್ತು ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿರಲಿಲ್ಲವೇನೋ. ಈಗಲಾದರೂ ಈ ಬಗ್ಗೆ ಸರಿಯಾದ ತನಿಖೆಯಾಗಿ ವ್ಯವಸ್ಥೆ ಬದಲಾಗಲಿ ಎಂದರು.

RELATED ARTICLES
- Advertisment -
Google search engine

Most Popular