ಕೆ.ಆರ್.ನಗರ: ರಾಜ್ಯ ಸರ್ಕಾರ ರಾಜ್ಯದ ೧೬೧ ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಿಸಿದ್ದು ಇದರಲ್ಲಿ ಕೆ.ಆರ್.ನಗರ ತಾಲ್ಲೂಕನ್ನು ಕೈಬಿಟ್ಟಿರುವುದು ಸರಿಯಲ್ಲ ಕೂಡಲೇ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸುವಂತೆ ರೈತ ಸಂಘದ ರಾಜ್ಯ ಯುವ ಘಟಕದ ಅಧ್ಯಕ್ಷ ಫಯಾಜ್ ಒತ್ತಾಯಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜ್ಯದಲ್ಲಿ ತೀವ್ರ ಬರದ ಹಿನ್ನಲೆಯಲ್ಲಿ ಮೈಸೂರು ದಸರಾವನ್ನು ಸರಳ ಮತ್ತು ಸಾಂಪ್ರದಾಯಿಕವಾಗಿ ಆಚರಿಸಬೇಕೆಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದರು.
ಮೈಸೂರು ಜಿಲ್ಲಾಧ್ಯಕ್ಷರಾದ ಎಂ.ಎನ್. ನಾಗೇಶ್ ಮಾತನಾಡಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾರಂಗಿ ನಾಲೆಯ ಅಚ್ಚುಕಟ್ಟು ಪ್ರದೇಶಗಳಿಗೆ ನೀರು ತಲುಪದೆ ಬಿತ್ತನೆ ಕಾರ್ಯ ಕುಂಠಿತವಾಗಿದೆ. ಕೊನೆ ಘಟ್ಟದ ಪ್ರದೇಶಗಳಿಗೆ ನೀರು ತಡವಾಗಿ ತಲುಪಿದು ಇನ್ನು ಅನೇಕ ಭಾಗಗಳಲ್ಲಿ ಬಿತ್ತನೆ ಕಾರ್ಯ ಆರಂಭವಾಗಿಲ್ಲ. ಬಿತ್ತನೆ ಕಾರ್ಯ ಈಗ ಮಾಡಿದರು ಸೂಕ್ತ ಇಳುವರಿ ದೊರೆಯುವುದಿಲ್ಲ ಆದ ಕಾರಣ ಸರ್ಕಾರ ಈ ಕೂಡಲೇ ಕೆ.ಆರ್.ನಗರ ಹಾಗೂ ಸಾಲಿಗ್ರಾಮ ತಾಲ್ಲೂಕಗಳನ್ನು ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣೇಗೌಡ, ತಾಲ್ಲೂಕು ಅಧ್ಯಕ್ಷರಾದ ಬಾಲಕೃಷ್ಣ, ಮಹಿಳಾ ಅಧ್ಯಕ್ಷರಾದ ವೀಣಾ ಬಸವರಾಜ್, ಹೊಸಅಗ್ರಹಾರ ಹೋಬಳಿ ಅಧ್ಯಕ್ಷರಾದ ಮಲ್ಲಿಕಾ, ಕಸಬಾ ಅಧ್ಯಕ್ಷರಾದ ಶಿವರುದ್ರಪ್ಪ, ನಂಜುಂಡಸ್ವಾಮಿ ಮುಂತಾದವರು ಭಾಗವಹಿಸಿದ್ದರು.