ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದ ಹಿನ್ನೆಲೆ ವಿಜಯೋತ್ಸವ ಆಚರಣೆ
ಪಿರಿಯಾಪಟ್ಟಣ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಮತ್ತು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಭಾರಿ ಅಂತರದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಎಂ.ಎಂ ರಾಜೇಗೌಡ ತಿಳಿಸಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪಂಚ ರಾಜ್ಯ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆದ ಹಿನ್ನೆಲೆ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು, ತೆಲಂಗಾಣ ರಾಜ್ಯದಲ್ಲಿ ಕಾಂಗ್ರೆಸ್ ಜಯಗಳಿಸಲು ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್, ಜಮೀರ್ ಅಹಮದ್ ಅವರ ಭಾಷಣ ಮತ್ತು ಸಂಘಟನೆಯ ಪ್ರಚಾರ ಕಾರಣವಲ್ಲ ಬದಲಾಗಿ ರಾಜ್ಯದಲ್ಲಿ ಭ್ರಷ್ಟಾಚಾರ ಮಾಡಿ ತೆಲಂಗಾಣಕ್ಕೆ ಕೊಂಡೊಯ್ದು ಹಂಚಿದ ಹಣವಾಗಿದೆ ಆದರೂ ಅಲ್ಲಿ ಬಿಜೆಪಿಯ ಸಾಧನೆ ಸಂತಸ ತಂದಿದೆ, ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತ ಮನಗಂಡು ಮಧ್ಯಪ್ರದೇಶ ರಾಜಸ್ಥಾನ ಛತ್ತೀಸ್ ಗಡ್ ರಾಜ್ಯಗಳಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಿದ್ದು ಇದು ಮುಂಬರುವ ಲೋಕಸಭಾ ಚುನಾವಣೆಯ ದಿಕ್ಸೂಚಿಯಾಗಿದೆ ಕಳೆದ ಲೋಕಸಭಾ ಚುನಾವಣೆಗಿಂತ ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮೈತ್ರಿಕೂಟದೊಂದಿಗೆ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಿಯಾಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಕೊಪ್ಪ ರಾಜೇಂದ್ರ ಅವರು ಮಾತನಾಡಿ ಪಂಚರಾಜ್ಯ ಚುನಾವಣೆಯಲ್ಲಿ ಮತದಾರರು ಕಾಂಗ್ರೆಸ್ ನೀಡಿದ ಗ್ಯಾರಂಟಿಗಳನ್ನು ತಿರಸ್ಕರಿಸಿ ಮೋದಿ ಅವರೇ ನಮಗೆ ಗ್ಯಾರಂಟಿ ಎಂದು ಸಾಬೀತುಪಡಿಸಿದ್ದಾರೆ, ಬೂತ್ ಮಟ್ಟದ ಕಾರ್ಯಕರ್ತರು ಪಕ್ಷಕ್ಕೆ ಬೆನ್ನೆಲುಬಾಗಿದ್ದು ಅವರ ಸಂಘಟಿತ ಪ್ರಯತ್ನದಿಂದ ಚುನಾವಣೆಗಳನ್ನು ಎದುರಿಸಿದರೆ ಯಶಸ್ಸು ಖಂಡಿತ ಸಿಗುತ್ತದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಸಂಘಟಿತರಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪರ ಯೋಜನೆಗಳನ್ನು ಮತದಾರರಿಗೆ ತಲುಪಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೈಸೂರು ಕೊಡಗು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಯಗಳಿಸಲು ಪ್ರಾಮಾಣಿಕ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ಮುಖಂಡರಾದ ಕೌಲನಹಳ್ಳಿ ಸೋಮಶೇಖರ್, ತಾಲೂಕು ಪ್ರಧಾನ ಕಾರ್ಯದರ್ಶಿ ಬೆಮ್ಮತ್ತಿ ಚಂದ್ರು ಮಾತನಾಡಿದರು, ಪಕ್ಷದ ವರಿಷ್ಠರ ಪರ ಜೈಕಾರ ಕೂಗಿ ಸಿಹಿ ಹಂಚಿ ವಿಜಯೋತ್ಸವ ಆಚರಿಸಲಾಯಿತು.
ಈ ಸಂದರ್ಭ ಬಿಜೆಪಿ ಪಕ್ಷದ ವಿವಿಧ ಮೋರ್ಚಾ ಪದಾಧಿಕಾರಿಗಳಾದ ಲೋಕಪಾಲಯ್ಯ, ಶುಭಗೌಡ, ಶರವಣ್, ಎಂ.ಪಿ ರಾಜು, ಕಿರಂಗೂರು ಮೋಹನ್, ನಳಿನಿ, ಬಾನು, ರಾಘವೇಂದ್ರ, ಮತ್ತು ಕಾರ್ಯಕರ್ತರು ಇದ್ದರು.