ಚಾಮರಾಜನಗರ: ಜೈ ಹಿಂದ್ ಪ್ರತಿಷ್ಠಾನ ಮತ್ತು ಋಗ್ವೇದಿ ಯೂಥ್ ಕ್ಲಬ್ ಸ್ವಾಮಿ ವಿವೇಕಾನಂದ ಜಯಂತಿ ಹಾಗೂ ನೇತಾಜಿ ಜನ್ಮದಿನ ಅಂಗವಾಗಿ ಹಮ್ಮಿಕೊಂಡಿರುವ ಜೈ ಹಿಂದ್ ಅಭಿಯಾನ ಕಾರ್ಯಕ್ರಮಕ್ಕೆ ರಾಷ್ಟ್ರದ ಪ್ರಸಿದ್ಧ ನ್ಯಾಯವಾದಿ ಹಾಗೂ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷರಾದ ಅಶೋಕ ಹಾರನಹಳ್ಳಿ ರವರು ಪುಷ್ಪ ಸಲ್ಲಿಸಿ ಉದ್ಘಾಟಿಸಿದರು.
ಶಂಕರಪುರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ಜೈ ಹಿಂದ್ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ ಭಾರತದ ಸ್ವಾತಂತ್ರ್ಯ ಚಳುವಳಿ ಹೊಸ ಸ್ವರೂಪವನ್ನು ಪಡೆಯಲು ನೇತಾಜಿ ಸುಭಾಷ್ ಚಂದ್ರ ಬೋಸ್ ರವರು ಕಾರಣರಾಗಿದ್ದಾರೆ. ಭಾರತೀಯ ರಾಷ್ಟ್ರೀಯ ಸೈನ್ಯ ಐಎನ್ಎ ಹೋರಾಟವನ್ನು ಭಾರತೀಯರು ಸದಾ ಕಾಲ ಸ್ಮರಿಸಬೇಕು. ನೇತಾಜಿಯವರ ಇತಿಹಾಸದ ಹೋರಾಟದ ಅಂಶಗಳನ್ನು ತಿಳಿಸಲು ಹಮ್ಮಿಕೊಂಡಿರುವ ಜೈ ಹಿಂದ್ ಅಭಿಯಾನ ಎಲ್ಲೆಡೇ ಯಶಸ್ವಿಯಾಗಲಿ ಎಂದು ತಿಳಿಸಿದರು.
ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ವೇದ ಬ್ರಹ್ಮ ಶ್ರೀ ರಾಘವೇಂದ್ರ ಭಟ್ ವೇದ ಮಂತ್ರಗಳೊಂದಿಗೆ ಶುಭ ಹಾರೈಸಿದರು. ಸ್ವಾಮಿ ವಿವೇಕಾನಂದರು ಭಾರತದ ರಾಷ್ಟ್ರೀಯ ಸಂತರು. ತಮ್ಮ ಚಿಕಾಗೋ ಭಾಷಣದ ಮೂಲಕ ಇಡೀ ಜಗತ್ತಿಗೆ ಭಾರತದ ಸಂಸ್ಕೃತಿ ಪರಂಪರೆ, ಗೌರವ ,ಸ್ನೇಹ, ವಿಶ್ವಾಸ ಸಹಕಾರ ,ಮಾತೃ ಶಕ್ತಿ ಹಾಗೂ ಸೌಹಾರ್ದತೆ, ಮಾನವೀಯ ಮೌಲ್ಯಗಳ ಚಿಂತನೆ,ಏಕತೆಯ ಶ್ರೇಷ್ಠತೆಯ ಅಂಶವನ್ನು ಸಾರಿದವರು. ವಿವೇಕಾನಂದರ ಚಿಂತನೆಗಳು ಎಂದು ವಿಶ್ವದ ಎಲ್ಲೆಡೆ ಹರಡಿ ಯುವ ಶಕ್ತಿಗೆ ಹೊಸ ಚೈತನ್ಯವನ್ನು ನೀಡುತ್ತಿದೆ. ಋಗ್ವೇದಿ ಯೂತ್ ಕ್ಲಬ್ ವಿಶೇಷವಾಗಿ ಜೈ ಹಿಂದ್ ಅಭಿಯಾನವನ್ನು ಹಮ್ಮಿಕೊಂಡಿರುವುದು ರಾಷ್ಟ್ರದಲ್ಲೆ ವಿಶೇಷವಾದದ್ದು. ಜೈ ಹಿಂದ್ ಘೋಷಣೆ ಪ್ರತಿ ಭಾರತೀಯನಲ್ಲೂ ಮೊಳಗಬೇಕು, ಅನುಷ್ಠಾನವಾಗಬೇಕು. ಪ್ರತಿ ಕಾರ್ಯದಲ್ಲು ಭಾರತೀಯತೆ, ಮುನ್ನಡೆಯಬೇಕು ಎಂದರು.
ಆಧ್ಯಾತ್ಮಿಕ ಗುರುಗಳಾದ ಶ್ರೀರಂಗಪಟ್ಟಣದ ವೇದ ಬ್ರಹ್ಮ ಶ್ರೀ ಭಾನುಪ್ರಕಾಶ್ ಶರ್ಮ ಮಾತನಾಡಿ ಋಗ್ವೇದಿ ಯೂತ್ ಕ್ಲಬ್ ಅಪಾರ ರಾಷ್ಟ್ರೀಯ ಸೇವೆಯನ್ನು, ಕಾರ್ಯಕ್ರಮಗಳನ್ನು ರೂಪಿಸಿ ರಾಷ್ಟ್ರಕ್ಕೆ ಅರ್ಪಿಸಿಕೊಂಡ ಮಹಾನ್ ಚೇತನಗಳನ್ನು ಸ್ಮರಿಸಿ, ಗೌರವಿಸುವ ,ವಿಶೇಷ ಧ್ಯೇಯ ಉದ್ದೇಶಗಳು ಯುವಕರಲ್ಲಿ ವಿದ್ಯಾರ್ಥಿಗಳಲ್ಲಿ ಹಾಗೂ ಸಮಾಜದಲ್ಲಿ ಹೊಸ ಪರಿವರ್ತನೆಯನ್ನು ಉಂಟುಮಾಡುತ್ತದೆ ಎಂದರು.
ಅಧ್ಯಕ್ಷತೆಯನ್ನು ವಹಿಸಿದ್ದ ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು ಮತ್ತು ರಾಷ್ಟ್ರ ಯುವ ಪ್ರಶಸ್ತಿ ಪುರಸ್ಕೃತರವಾದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಜೈ ಹಿಂದ್ ಪ್ರತಿಷ್ಠಾನ ಹಾಗೂ ಋಗ್ವೇದಿ ಯೂತ್ ಕ್ಲಬ್ ಭಾರತೀಯ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರೀಯ ಚಿಂತನೆಗಳ ಮೂಲಕ ದೇಶಭಕ್ತಿ, ದೇಶದ ಇತಿಹಾಸ ಕಲೆ, ಸಾಹಿತ್ಯ, ಸಂಗೀತ, ಆಧ್ಯಾತ್ಮ ಹಾಗೂ ರಾಷ್ಟ್ರೀಯ ಮೌಲ್ಯಗಳ ಬಗ್ಗೆ ವಿಶೇಷ ಉಪನ್ಯಾಸಗಳು, ಜಾಗೃತಿಯ ಅರಿವಿನ ಕಾರ್ಯಕ್ರಮವನ್ನು ಸರಳವಾಗಿ ಸದಾಕಾಲ ಆಚರಿಸಿಕೊಂಡು ಸಾವಿರಾರು ಕಾರ್ಯಕ್ರಮಗಳನ್ನು ಜೈ ಹಿಂದ್ ಕಟ್ಟೆಯಲ್ಲಿ ರೂಪಿಸಿ, ಮಹಾನ್ ವ್ಯಕ್ತಿಗಳು ಭಾಗವಹಿಸಿ ಸರ್ವರಿಗೂ ಸ್ಪೂರ್ತಿಯನ್ನು ಉಂಟುಮಾಡಿದೆ. ಜೈ ಹಿಂದ್ ಕಟ್ಟೆಯಲ್ಲಿ ಇದುವರೆಗೂ ಎರಡು ಸಾವಿರಕ್ಕೂ ಹೆಚ್ಚು ಜಯಂತಿ ಹಾಗೂ ಸ್ಮರಣೆ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಿರುವುದು ಆತ್ಮ ಸಂತೋಷ ನೀಡುವ ಕಾರ್ಯವಾಗಿದೆ. ಸಮಾಜದ ಎಲ್ಲ ಗಣ್ಯರು ಆಗಮಿಸಿ ಪ್ರೋತ್ಸಾಹಿಸುವುದು ನಮಗೆ ಮತ್ತಷ್ಟು ಬಲವನ್ನು ನೀಡಿದೆ ಎಂದರು.
ಅಖಿಲ ಕರ್ನಾಟಕ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಅಸಗೋಡು ಜಯಸಿಂಹ, ಬೆಂಗಳೂರಿನ ಸುಧಾಕರ್ ಬಾಬು, ಸುನಿಲ್ ಶಾಸ್ತ್ರಿ ,ಶಂಕರ್ ಪ್ರಸಾದ್ ಋಗ್ವೇದಿ ಯೂತ್ ಕ್ಲಬ್ ಅಧ್ಯಕ್ಷರಾದ ಶರಣ್ಯ ಎಸ್ ಋಗ್ವೇದಿ, ರವಿ ಉಪಸ್ಥಿತರಿದ್ದರು.