ಗುಂಡ್ಲುಪೇಟೆ: ಪೂರ್ಣ ಪ್ರಮಾಣದಲ್ಲಿ ಸೌಲಭ್ಯಗಳನ್ನು ಕೈಗೊಳ್ಳದ ಜೊತೆಗೆ ಆತುರವಾಗಿ ಕಾಮಗಾರಿ ನಡೆಸಿರುವ ಕಾರಣ ಕೂಸಿನ ಮನೆ ಉದ್ಘಾಟಿಸಲು ಬಂದಿದ್ದ ಶಿಂಡನಪುರ ಗ್ರಾಪಂ ಪಿಡಿಒ ಮತ್ತು ಕೂಸಿನ ಮನೆ ತಾಲೂಕು ಮೇಲ್ವಿಚಾರಕಿರನ್ನ ದೊಡ್ಡತುಪ್ಪೂರು ಗ್ರಾಮಸ್ಥರು ವಾಪಸ್ಸು ಕಳುಹಿಸಿದರು.
ನಮ್ಮ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅಕ್ಷರ ದಾಸೋಹ ಅಡುಗೆ ಮನೆ ಹಲವು ವರ್ಷಗಳಿಂದ ನಿರುಪಯುಕ್ತವಾಗಿತ್ತು. ಸೂಕ್ತ ತಳಪಾಯ ಇಲ್ಲದ ಕಾರಣ ಸುತ್ತಲೂ ಮಳೆ ನೀರು ಸಂಗ್ರಹವಾಗಿ ಶಿಥಿಲಾವಸ್ಥೆ ತಲುಪಿದೆ. ಕಟ್ಟಡಕ್ಕೆ ಸೂಕ್ತ ಗಾಳಿ ಬೆಳಕಿನ ವ್ಯವಸ್ಥೆ ಇಲ್ಲ. ಮೇಲ್ಛಾವಣೆಯೂ ಸರಿಯಿಲ್ಲ. ಇಂತಹ ಕಟ್ಟಡಕ್ಕೆ ತಿಂಗಳ ಹಿಂದೆ ಬಣ್ಣ ಬಳಿಯಲಾಯಿತು. ಹೊರ ಮತ್ತು ಒಳಗಿನ ಗೋಡೆಗಳಲ್ಲಿ ಚಿತ್ರಗಳನ್ನು ಬಿಡಿಸಲಾಯಿತು. ಒಳ ಆವರಣದ ನೆಲಕ್ಕೆ ಆಗಷ್ಟೆ ಸಿಮೆಂಟ್ ಹಾಕಿಸಿ, ಅಲಂಕಾರಿಕ ಮ್ಯಾಟ್ ಹಾಕಲಾಗಿತ್ತು. ವಿದ್ಯುತ್ ಸಂಪರ್ಕ, ಫ್ಯಾನ್ ವ್ಯವಸ್ಥೆ ಮಾಡಿರಲಿಲ್ಲ.
ಈ ರೀತಿ ಇದ್ದರೂ ಮಂಗಳವಾರ ಪಿಡಿಒ ಮತ್ತು ಕೂಸಿನ ಮನೆ ತಾಲೂಕು ಮೇಲ್ವಿಚಾರಕಿ ಉದ್ಘಾಟನೆಗೆ ಬಂದಿದ್ದರು. ಕೂಸಿನ ಮನೆ ತೆರೆಯುವ ಉದ್ದೇಶದ ಬಗ್ಗೆ ಪ್ರಶ್ನಿಸಿದಾಗ ಸೌಲಭ್ಯ ಒದಗಿಸಿಲ್ಲದ ಮತ್ತು ಅರೆಬರೆ ಕಾಮಗಾರಿ ನಡೆಸಿದ ಬಗ್ಗೆ ತಪ್ಪೊಪ್ಪಿಕೊಂಡು ಹೊರಟು ಹೋದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ.