Tuesday, April 15, 2025
Google search engine

Homeಸ್ಥಳೀಯವಿಶೇಷ ಮಕ್ಕಳ ಆರೈಕೆ ಕೇಂದ್ರ ಉದ್ಘಾಟನೆ

ವಿಶೇಷ ಮಕ್ಕಳ ಆರೈಕೆ ಕೇಂದ್ರ ಉದ್ಘಾಟನೆ

ಮೈಸೂರು: ವಿಶೇಷ ಮಕ್ಕಳು ಎಲ್ಲ ಮಕ್ಕಳಂತೆ ಸಾಮರ್ಥ್ಯ ಗಳಿಸಲು ವಿಶೇಷ ಆರೈಕೆ ಕೇಂದ್ರಗಳನ್ನು ಹೆಚ್ಚು ತೆರೆಯಬೇಕಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಪ್ರತಿಪಾದಿಸಿದರು.

ಕೆ.ಜಿ.ಕೊಪ್ಪಲು ಸರ್ಕಾರಿ ಶಾಲೆ ಆವರಣದ ಸರ್ಕಾರಿ ಕಟ್ಟಡದಲ್ಲಿ ರೀಬಾರ್ನ್ ಪ್ರತಿಷ್ಠಾನ ಆರಂಭಿಸಿರುವ ವಿಶೇಷ ಮಕ್ಕಳ ಆರೈಕೆ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಅಂಗವಿಕಲ ಹಾಗೂ ವಿಶೇಷ ಮಕ್ಕಳ ಆರೈಕೆ ಸುಲಭವಲ್ಲ. ಪೋಷಕರಿಗೂ ವಿಶೇಷ ಆರೈಕೆಯ ಪಾಠಗಳನ್ನು ನೀಡಬೇಕಾಗುತ್ತದೆ. ಚಿಕಿತ್ಸೆಗಳನ್ನು ನೀಡಬೇಕಾಗುತ್ತದೆ. ವಿಶೇಷ ಶಿಕ್ಷಣವನ್ನು ಮಕ್ಕಳಿಗೆ ನೀಡಬೇಕಾಗುತ್ತದೆ. ಈ ಮೂಲಕ ಅವರ ಸಾಮರ್ಥ್ಯ ಹೆಚ್ಚಿಸಬಹುದು ಎಂದರು.

ಮನುಷ್ಯ ಕೇವಲ ತನಗಾಗಿ ಬದುಕಿದರೆ ಅದು ಸ್ವಾರ್ಥ. ಇತರರಿಗಾಗಿ ಬದುಕುವ ನಿಸ್ವಾರ್ಥದಲ್ಲಿ ಸೇವೆಯಲ್ಲಿ ದೇವರನ್ನು ಕಾಣಬಹುದಾಗಿದೆ. ಪರೋಪಕಾರವನ್ನು ಪ್ರತಿಯೊಬ್ಬರು ಮಾಡಿದರೆ ಸುಖಿರಾಜ್ಯ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಬದುಕಿನ ಯಶಸ್ಸಿಗಾಗಿ ಆಸ್ತಿಕರು ದೇವರ ಪೂಜೆ ಮಾಡುತ್ತಾರೆ. ಆದರೆ, ಗುಡಿ-ಗೋಪುರಗಳಲ್ಲಿ ಮಾತ್ರ ಪೂಜೆ ಮಾಡಿದರೇ ಸಾಲವುದಿಲ್ಲ. ಎಲ್ಲರ ಹೃದಯದಲ್ಲಿಯೂ ನಾನಿದ್ದೇನೆ. ಕಷ್ಟದಲ್ಲಿರುವವರಿಗೆ ನೆರವಾದರೆ ನನಗೆ ಪೂಜೆ ಸಲ್ಲಿಸಿದಂತೆ ಎಂದು ದೇವರು ಹೇಳುತ್ತಾನೆ. ಹೀಗಾಗಿ ಸೇವೆಯೇ ಭಗವಂತನ ಆರಾಧನೆ ಎಂದರು.

ವಿಶೇಷ ಮಕ್ಕಳು ಎಲ್ಲರಂತೆ ಸಹಜವಾಗಿ ಬದುಕಲು ಆಗುವುದಿಲ್ಲ. ಹುಟ್ಟಿನಿಂದಲೇ ಸಮಸ್ಯೆಯನ್ನು ಎದುರಿಸುತ್ತಿರುವ ಮಕ್ಕಳಿಗೆ ಶಿಕ್ಷಣ ನೀಡುವುದು ಸವಾಲಿನ ಕೆಲಸ. ಅವರಿಗೆ ಸಹಾಯಹಸ್ತವನ್ನು ಚಾಚಿದಾಗ ಮಾತ್ರ ನೆಮ್ಮದಿಯ ಜೀವನವನ್ನು ಅವರ ಪೋಷಕರಿಗೂ ನೀಡಬಹುದು ಎಂದರು. ವಿಶೇಷ ಮಕ್ಕಳಲ್ಲಿ ಕೀಳರಿಮೆ ಮೂಡದಂತೆ ಶಿಕ್ಷಣವನ್ನು ನೀಡಿ, ಸಾಮರ್ಥ್ಯವನ್ನು ಹೆಚ್ಚಿಸುವುದು ಎಲ್ಲರ ಜವಾಬ್ದಾರಿಯಾಗಿದೆ. ಸಹಾಯಹಸ್ತ ನೀಡಬೇಕಿದೆ ಎಂದು ತಿಳಿಸಿದರು.
ಶಾಸಕ ಟಿ.ಎಸ್.ಶ್ರೀವತ್ಸ ಮಾತನಾಡಿ, ಮನೆಯಲ್ಲಿ ಪತಿ ಪತ್ನಿ ಇಬ್ಬರೂ ದುಡಿಯುವ ಜವಾಬ್ದಾರಿಯನ್ನು ಹೊತ್ತಿದ್ದರೆ, ಅವರಿಗೆ ವಿಶೇಷ ಮಕ್ಕಳಿದ್ದರೆ ಆರೈಕೆಯು ಸರಿಯಾಗಿ ಸಿಗುವುದಿಲ್ಲ. ಥೆರಪಿಯನ್ನು ನೀಡಿ, ಆಹಾರ ವ್ಯವಸ್ಥೆಯನ್ನು ಮಾಡಿರುವ ರೀಬಾರ್ನ್ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ ಎಂದರು. ಮೇಯರ್ ಶಿವಕುಮಾರ್, ಉಪಮೇಯರ್ ಡಾ.ಜಿ.ರೂಪಾ, ಪಾಲಿಕೆ ಸದಸ್ಯೆ ಎಂ.ಎಸ್.ಶೋಭಾ, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎನ್.ರಾಜು, ಸಮೂಹ ಸಂಪನ್ಮೂಲ ಕೇಂದ್ರದ ಶ್ರೀಕಂಠಸ್ವಾಮಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎ.ಆರ್.ಮಧುಸೂದನ, ರೀ ಬಾರ್ನ್ ಪ್ರತಿಷ್ಠಾನದ ರಾಕೇಶ್, ರಾಹುಲ್, ಪೂಜಾ, ವಿಜಯ್, ಯಶ್ವಂತ್ ಇದ್ದರು.

ಸೇವಾ ಕಾರ್ಯಗಳಿಗೆ ಸರ್ಕಾರದ ನೆರವು ಇದ್ದೇ ಇದೆ. ನಗರದ ಲಲಿತಮಹಲ್ ಬಳಿ ವಿಶೇಷ ಮಕ್ಕಳಿಗೆ ಆರೈಕೆ ಕೇಂದ್ರವು ಮೂರು ದಶಕಗಳ ಹಿಂದೆ ಇತ್ತು. ಇದೀಗ ನಗರ ಮಧ್ಯಭಾಗದಲ್ಲಿ ಆರೈಕೆ ಕೇಂದ್ರ ಆರಂಭಿಸಿರುವುದು ಉತ್ತಮ ಕಾರ್ಯ. ಶಾಸಕರ ಅನುದಾನದಿಂದ ಅಗತ್ಯ ಪರಿಕರಗಳನ್ನು ಕೇಂದ್ರಕ್ಕೆ ಒದಗಿಸಲಾಗುವುದು.
-ಟಿ.ಎಸ್.ಶ್ರೀವತ್ಸ, ಶಾಸಕ

RELATED ARTICLES
- Advertisment -
Google search engine

Most Popular