ಪಿರಿಯಾಪಟ್ಟಣ: ಪತ್ರಿಕಾ ವಿತರಕರನ್ನು ಇ-ಶ್ರಮ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದು ಶ್ಲಾಘನೀಯ ಎಂದು ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬೆಕ್ಕರೆ ಸತೀಶ್ ಆರಾಧ್ಯ ತಿಳಿಸಿದರು.
ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಕಾರ್ಮಿಕ ಇಲಾಖೆ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ ಮತ್ತು ವಿಜಯವಾಣಿ ದಿನಪತ್ರಿಕೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ದಿನಪತ್ರಿಕೆ ವಿತರಣಾ ಕಾರ್ಮಿಕರ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಯೋಜನೆ ಯಡಿ ಇ-ಶ್ರಮ ಕಾರ್ಡ್ ವಿತರಿಸಿ ಅವರು ಮಾತನಾಡಿದರು.
ಮಳೆ ಬಿಸಿಲು ಚಳಿ ಎನ್ನದೆ ಪತ್ರಿಕೆಗಳನ್ನು ಮನೆಮನೆಗೆ ತಲುಪಿಸುವ ಪತ್ರಿಕಾ ವಿತರಕರಿಗೆ ಹಾಗು ಪತ್ರಿಕೆ ಹಂಚುವ ಹುಡುಗರಿಗೆ ಆಕಸ್ಮಿಕ ಸಂದರ್ಭಗಳಲ್ಲಿ ನೈತಿಕಸ್ಥೈರ್ಯ ತುಂಬಲು ಸರ್ಕಾರ ಅವರನ್ನು ಇ-ಶ್ರಮ ಯೋಜನೆ ವ್ಯಾಪ್ತಿಗೆ ಒಳಪಡಿಸಿರುವುದು ಶ್ಲಾಘನೀಯ ಈ ನಿಟ್ಟಿನಲ್ಲಿ ವಿಜಯವಾಣಿ ಪತ್ರಿಕೆ ಮತ್ತು ಕಾರ್ಮಿಕ ಇಲಾಖೆ ಪತ್ರಿಕಾ ವಿತರಿಕರಿಗಾಗಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿರುವುದು ಸಂತಸದ ವಿಷಯವಾಗಿದ್ದು ಆಯೋಜಕರಿಗೆ ಅಭಿನಂದನೆ ತಿಳಿಸಿದರು. ಹಿಂದೆಯೂ ರಾಜ್ಯಾದ್ಯಂತ ಪತ್ರಿಕೆ ವಿತರಿಸುವ ಹುಡುಗರ ಸಮೀಕ್ಷೆ ನಡೆಸಿ ಪತ್ರಿಕೆ ಹಂಚುವವರಿಗೆ ಸೇವಾ ಭದ್ರತೆ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸಲಾಗಿತ್ತು ಎಂದರು.
ಕಾರ್ಮಿಕ ನಿರೀಕ್ಷಕ ಎನ್.ಮಂಜುನಾಥ್ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪತ್ರಿಕಾ ವಿತರಕರಿಗೆ ಅಪಘಾತ ಪರಿಹಾರ ಮತ್ತು ವೈದ್ಯಕೀಯ ಸೌಲಭ್ಯ ಕಲ್ಪಿಸುವ ಮೂಲಕ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ, 18 ರಿಂದ 59 ವರ್ಷದೊಳಗಿನ ಇಎಸ್‌ಐ ಇಪಿಎಫ್ ಸೌಲಭ್ಯ ಹೊಂದಿರದ ಮತ್ತು ಆದಾಯ ತೆರಿಗೆ ಪಾವತಿದಾರರಾಗಿರದ ಎಲ್ಲರೂ ಯೋಜನೆಯನ್ನು ಪಡೆಯಲು ಅರ್ಹರಾಗಿದ್ದಾರೆ.

ಈ ಯೋಜನೆಗೆ ಒಳಪಟ್ಟಿರುವ ಕಾರ್ಮಿಕರು ಆಕಸ್ಮಿಕ ಸಂದರ್ಭ ಅಪಘಾತದಲ್ಲಿ ಮೃತಪಟ್ಟರೆ ವಾರಸುದಾರರಿಗೆ 2 ಲಕ್ಷ ರೂ ಪರಿಹಾರ ಹಾಗೂ ಶಾಶ್ವತ ದುರ್ಬಲತೆ ಹೊಂದಿದರೆ 2 ಲಕ್ಷ ರೂ ಹಾಗೂ ಮಾರಣಾಂತಿಕ ಕಾಯಿಲೆ ಅಥವಾ ಗಂಭೀರ ಅನಾರೋಗ್ಯಕ್ಕೆ ತುತ್ತಾದಲ್ಲಿ ಆಸ್ಪತ್ರೆ ವೆಚ್ಚದ ಮರುಪಾವತಿಯಾಗಿ 1 ಲಕ್ಷ ರೂ ವರೆಗೆ ನೀಡಲು ಅವಕಾಶವಿದೆ, ಅರ್ಹ ಫಲಾನುಭವಿಗಳು ಇ-ಶ್ರಮ ಪೋರ್ಟಲ್ ಮೂಲಕವೂ ಸ್ವಯಂ ಆಗಿ ಈ ಯೋಜನೆಗೆ ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದರು.ಕಾರ್ಯಕ್ರಮದಲ್ಲಿ 20ಕ್ಕೂ ಹೆಚ್ಚು ಪತ್ರಿಕಾ ವಿತರಕರಿಗೆ ಇ-ಶ್ರಮ ಕಾರ್ಡ್ ವಿತರಿಸಲಾಯಿತು.
ಈ ಸಂದರ್ಭ ವಿಜಯವಾಣಿ ತಾಲೂಕು ವರದಿಗಾರ ಸಿ.ಎನ್ ವಿಜಯ್, ಬೆಟ್ಟದಪುರ ವರದಿಗಾರ ಸಿ.ಜಿ ಪುನೀತ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿಚಂದ್ರ, ಬೂದಿತಿಟ್ಟು, ಪ್ರಧಾನ ಕಾರ್ಯದರ್ಶಿ ಪಿ.ಡಿ ಪ್ರಸನ್ನ, ಕಾರ್ಯದರ್ಶಿ ಅಶೋಕ್ ಆಲನಹಳ್ಳಿ, ಖಜಾಂಚಿ ಪಿ.ಎನ್ ದೇವೆಗೌಡ ಹಾಗೂ ನಿರ್ದೇಶಕರು ಮತ್ತು ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಪತ್ರಕರ್ತ ನವೀನ್ ಕುಮಾರ್, ಕಾರ್ಮಿಕ ಇಲಾಖೆ ಡಿಇಒಗಳಾದ ಚಂದ್ರಕಾಂತ್, ವಿಜಯ್ ಕುಮಾರ್, ತಾಲೂಕು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕುಮಾರ್, ಭಾರತೀಯ ಮಜದುರ್ ಸಂಘದ ತಾಲೂಕು ಅಧ್ಯಕ್ಷ ಮನು ಮತ್ತಿತರಿದ್ದರು.