Saturday, May 16, 2026
Google search engine

Homeಸ್ಥಳೀಯಮಳೆಗಾಲಕ್ಕೆ ತುರ್ತು ಸಿದ್ಧತೆ ಹೆಚ್ಚಿಸಿ ಸೆಸ್ಕ್‌ಗೆ : ನಿಷ್ಕ್ರಿಯ ಸಹಾಯವಾಣಿ ತಕ್ಷಣ ಸಕ್ರಿಯಗೊಳಿಸಿ : ನಿತೇಶ್...

ಮಳೆಗಾಲಕ್ಕೆ ತುರ್ತು ಸಿದ್ಧತೆ ಹೆಚ್ಚಿಸಿ ಸೆಸ್ಕ್‌ಗೆ : ನಿಷ್ಕ್ರಿಯ ಸಹಾಯವಾಣಿ ತಕ್ಷಣ ಸಕ್ರಿಯಗೊಳಿಸಿ : ನಿತೇಶ್ ಪಾಟೀಲ್ ಸೂಚನೆ

ಮೈಸೂರು :  ಮುಂಗಾರು ಅವಧಿಯಲ್ಲಿ ಉಂಟಾಗಬಹುದಾದ ವಿದ್ಯುತ್ ವ್ಯತ್ಯಯ ಹಾಗೂ ತುರ್ತು ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಎದುರಿಸಲು ಸೆಸ್ಕ್ ಸಂಪೂರ್ಣ ಸನ್ನದ್ಧವಾಗಿರಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ಹಾಗೂ ಪ್ರಾದೇಶಿಕ ಆಯುಕ್ತರೂ ಆಗಿರುವ ನಿತೇಶ್ ಪಾಟೀಲ್ ಸೂಚನೆ ನೀಡಿದರು.

ಮೈಸೂರಿನ ವಿಜಯನಗರ 2ನೇ ಹಂತದಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ಪ್ರಧಾನ ಕಚೇರಿಯಲ್ಲಿ ಮುಂಗಾರು ಹಿನ್ನೆಲೆಯಲ್ಲಿ ಶನಿವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ, ಸೆಸ್ಕ್ ವ್ಯಾಪ್ತಿಯ ಐದು ಜಿಲ್ಲೆಗಳ ಉಪ ವಿಭಾಗಗಳ ವ್ಯಾಪ್ತಿಯ ದೂರುಗಳ ನಿರ್ವಹಣೆ, ವಿದ್ಯುತ್ ಅಡಚಣೆಗಳು, ಸಾರ್ವಜನಿಕ ಸಂಪರ್ಕ ವ್ಯವಸ್ಥೆ ಹಾಗೂ ಅಗತ್ಯವಿರುವ ಸಾಮಗ್ರಿಗಳ ಸಂಗ್ರಹ ಕುರಿತು ನಿತೇಶ್ ಪಾಟೀಲ್ ಸಮಗ್ರ ಮಾಹಿತಿ ಪಡೆದುಕೊಂಡರು.

ನಂತರ ಮಾತನಾಡಿದ ಅವರು, “ಮುಂಗಾರು ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಗಳನ್ನು ಎದುರಿಸಲು ಸೆಸ್ಕ್‌ ಸನ್ನದ್ಧವಾಗಿದೆ ಎಂಬ ವಿಶ್ವಾಸ ಜನರಲ್ಲಿ ಮೂಡಬೇಕು. ಸಾರ್ವಜನಿಕರು ಸಂಪರ್ಕಿಸಲು ಸಾಧ್ಯವಾಗದಿದ್ದರೆ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲ. ಆದ್ದರಿಂದ ದೂರು ಸ್ವೀಕಾರ ಮತ್ತು ಸ್ಪಂದನಾ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಬೇಕಿದೆ. ಈ ನಿಟ್ಟಿನಲ್ಲಿ ಮುಂಗಾರು ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ತ್ವರಿತವಾಗಿ ಸ್ಪಂದನೆ ನೀಡುವುದು ಅತ್ಯಂತ ಮುಖ್ಯವಾಗಿದೆ. ಹೀಗಾಗಿ ಸೆಸ್ಕ್‌ ಟೋಲ್‌ ಫ್ರೀ ಹಾಗೂ ಸಾರ್ವಜನಿಕ ಸಂಪರ್ಕ ಸಂಖ್ಯೆಗಳು ನಿರಂತರವಾಗಿ ಕಾರ್ಯನಿರ್ವಹಿಸಬೇಕಿದೆ. ಆದ್ದರಿಂದ ನಿಷ್ಕ್ರಿಯವಾಗಿರುವ ಸಂಪರ್ಕ ಸಂಖ್ಯೆಗಳನ್ನು ತಕ್ಷಣವೇ ಸಕ್ರಿಯಗೊಳಿಸಬೇಕು” ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದೇ ವೇಳೆ ಐದು ಜಿಲ್ಲೆಗಳ ವ್ಯಾಪ್ತಿಯ ವಿಭಾಗಗಳ ಕಾರ್ಯಪಾಲಕ ಅಭಿಯಂತರರೊಂದಿಗೆ ಚರ್ಚೆ ನಡೆಸಿದ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರು, ಮುಂಗಾರು ಸಂದರ್ಭದಲ್ಲಿ ಎದುರಾಗಬಹುದಾದ ಸಮಸ್ಯೆಗಳು ಹಾಗೂ ಅವುಗಳನ್ನು ಎದುರಿಸಲು ಅಗತ್ಯವಿರುವ ಮೆಟೀರಿಯಲ್ಸ್‌ ಗಳ ಲಭ್ಯತೆ ಕುರಿತು ಮಾಹಿತಿ ಪಡೆದರು. ಮೊದಲ ಮಳೆಯಲ್ಲೇ ಸಾಕಷ್ಟು ತೊಂದರೆಗಳು ಎದುರಾಗಿರುವುದರಿಂದ ಅಗತ್ಯ ಸಾಮಗ್ರಿಗಳನ್ನು ಮುಂಚಿತವಾಗಿಯೇ ಸಂಗ್ರಹಿಸಿಟ್ಟುಕೊಳ್ಳುವಂತೆ”ಸೂಚಿಸಿದರು.

ಸಮಸ್ಯೆ ಉಂಟಾದ ಬಳಿಕ ಮೆಟೀರಿಯಲ್ಸ್ ಕೇಳುವ ಬದಲು ಪೂರ್ವಯೋಜಿತವಾಗಿ ಸ್ಟಾಕ್ ಇಟ್ಟುಕೊಳ್ಳಬೇಕು. ಪದೇ ಪದೇ ಬೇಡಿಕೆ ಇಡುವುದಕ್ಕಿಂತ ಅಗತ್ಯವಿರುವಷ್ಟು ಸಾಮಗ್ರಿಗಳನ್ನು ಈಗಲೇ ಪೂರೈಕೆ ಮಾಡಿಕೊಳ್ಳುವುದು ಉತ್ತಮ,” ಎಂದ ಅವರು, ಎಲ್ಲಾ ಇಇಗಳು ತಮ್ಮ ವಿಭಾಗಗಳಲ್ಲಿರುವ ಸ್ಟಾಕ್ ಮಾಹಿತಿಯನ್ನು ನಿರಂತರವಾಗಿ ಅಪ್ಡೇಟ್ ಮಾಡಬೇಕು ಎಂದು ಸೂಚಿಸಿದರು.

ಸರಿಯಾದ ಸಮಯಕ್ಕೆ ಮೆಟೀರಿಯಲ್ಸ್ ಸಪ್ಲೇ ಆಗದಿದ್ದರೆ ಕೆಲಸ ನಿರ್ವಹಿಸುವುದು ಕಷ್ಟ. ಎಲ್ಲಾ ವಿಭಾಗಗಳಿಗೂ ಶೀಘ್ರವಾಗಿ ಸಾಮಗ್ರಿಗಳು ತಲುಪಬೇಕು. ಆದ್ದರಿಂದ ಯಾವುದೇ ಡಿವಿಜನ್‌ ನಿಂದ ಬೇಡಿಕೆ ಬಂದ ಕೂಡಲೇ ಅಗತ್ಯ ಸಾಮಗ್ರಿಗಳನ್ನು ತ್ವರಿತವಾಗಿ ಪೂರೈಸಬೇಕು ಎಂದು ನಿಗಮ ಕಚೇರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ ಅವರು, ಮುಂಗಾರು ಅವಧಿಯಲ್ಲಿ ಹೆಚ್ಚಿನ ಬೇಡಿಕೆ ಇರುವುದರಿಂದ ಕನಿಷ್ಠ ಎರಡು ತಿಂಗಳಿಗೆ ಅಗತ್ಯವಾಗುವಷ್ಟು ಕಂಬಗಳು ಹಾಗೂ ಇತರೆ ಮೆಟೀರಿಯಲ್ಸ್‌ಗಳನ್ನು ಈಗಲೇ ಪೂರೈಕೆ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಮುಂಗಾರು ಸಂದರ್ಭದಲ್ಲಿ ಎಸ್‌ ಒಪಿ ಪ್ರಕಾರ ಕೆಲಸ ನಿರ್ವಹಿಸದ ಗುತ್ತಿಗೆದಾರರಿಗೆ ನೋಟೀಸ್ ನೀಡಬೇಕಿದೆ.  ಮಳೆಗಾಲದ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಹಾಗೂ ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸ ನೀಡಬೇಕು. ಕೆಲಸದಲ್ಲಿ ನಿರ್ಲಕ್ಷ್ಯ ತೋರಿಸುವವರಿಗೆ ಕಡಿಮೆ ಕೆಲಸ ನೀಡಬೇಕಿದೆ. ಮುಂಗಾರು ವೇಳೆ ಕೆಲಸದಲ್ಲಿ ವಿಳಂಬ ಮಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಹೀಗಾಗಿ ಅಂತಹ ಗುತ್ತಿಗೆದಾರರಿಗೆ ನೋಟೀಸ್ ನೀಡಿ ಎಂದು ಪ್ರಭಾರ ವ್ಯವಸ್ಥಾಪಕ ನಿರ್ದೇಶಕ ನಿತೇಶ್‌ ಪಾಟೀಲ್‌ ಸೂಚನೆ ನೀಡಿದರು.

ಮಳೆಗಾಲದ ಸಮಯದಲ್ಲಿ ಸಾಕಷ್ಟು ಕಡೆಗಳಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇರಲಿದೆ. ಇಂತಹ ಸಂದರ್ಭಗಳಲ್ಲಿ ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದ್ದು, ಸೆಸ್ಕ್ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ವಿದ್ಯುತ್ ಅಪಘಾತಗಳು ಆಗದಂತೆ ನಿಗಾವಹಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ತಾಂತ್ರಿಕ ನಿರ್ದೇಶಕರಾದ ಶರಣಮ್ಮ ಎಸ್. ಜಂಗಿನ, ಮುಖ್ಯ ಪ್ರಧಾನ ವ್ಯವಸ್ಥಾಪಕಿ(ಆಂತರಿಕ ಲೆಕ್ಕಪರಿಶೋಧನೆ) ಲಿಂಗರಾಜಮ್ಮ, ಮುಖ್ಯ ಇಂಜಿನಿಯರ್ ಎಲ್. ಲೋಕೇಶ್, ಅಧೀಕ್ಷಕ ಇಂಜಿನಿಯರ್‌ಗಳಾದ ಸುನೀಲ್ ಕುಮಾರ್, ಸೋಮಶೇಖರ್, ಪ್ರಧಾನ ವ್ಯವಸ್ಥಾಪಕರಾದ ಡಾ.ಬಿ.ಆರ್. ರೂಪ, ‌ಆರ್‌. ರಾಮಸ್ವಾಮಿ, ಎಚ್‌.ಆರ್‌. ದಿನೇಶ್ ಹಾಗೂ ಇತರ ಅಧಿಕಾರಿಗಳು ಇದ್ದರು.‌

RELATED ARTICLES
- Advertisment -
Google search engine

Most Popular