ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ದರ ಶೇ.೨.೮೪ ರಷ್ಟಿದ್ದು, ೨೦೧ ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ೨೦೨೪ರ ಜನವರಿ ೨ರಿಂದ ಮತ್ತೆ ಕೋವಿಡ್ ವ್ಯಾಕ್ಸಿನ್ ಅಭಿಯಾನ ಆರಂಭ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.
ರಾಜ್ಯದಲ್ಲಿ ಓಮಿಕ್ರಾನ್ ಉಪತಳಿ ಜೆಎನ್.೧ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ರಾಜ್ಯದಲ್ಲಿ ದಾಖಲಾಗುತ್ತಿರುವ ಹೊಸ ಕೊರೋನಾ ಪ್ರಕರಣಗಳಲ್ಲಿ ಶೇ.೯೦ ರಷ್ಟು ಜೆಎನ್.೧ ಅಂಶ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ರಾಜ್ಯ ಸರ್ಕಾರ ಉಚಿತ ಕೋರ್ಬಿವ್ಯಾಕ್ಸ್ ಲಸಿಕೆ ನೀಡಲು ನಿರ್ಧರಿಸಿದೆ. ಸದ್ಯ ೧೫,೮೦೦ ಲಸಿಕೆಯನ್ನು ಸರ್ಕಾರ ಈಗಾಗಲೇ ಖರೀದಿ ಮಾಡಿದ್ದು, ಇದರ ಜತೆಗೆ ಪ್ರಾಥಮಿಕ ಹಂತದಲ್ಲಿ ೩೦ ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ನಿರ್ಧರಿಸಿದೆ.
ರಾಜ್ಯದಲ್ಲಿ ಮುನ್ನೆಚ್ಚರಿಕಾ ಲಸಿಕೆಯನ್ನು ಶೇ. ೨೭ ಜನರು ಮಾತ್ರ ಪಡೆದಿದ್ದಾರೆ. ಸದ್ಯ ರಾಜ್ಯದಲ್ಲಿ ಇನ್ನು ೧.೫ ಕೋಟಿಗೂ ಅಧಿಕ ಜನರು ಮುನ್ನೆಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅರ್ಹತೆ ಪಡೆದಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ರಾಜ್ಯದಲ್ಲಿ ಈಗಾಗಲೇ ಮೊದಲ ಮತ್ತು ಎರಡನೇ ವ್ಯಾಕ್ಸಿನೇಶನ್ ಡೋಸ್ ೧೦೦% ಮಾಡಲಾಗಿದೆ. ಆದರೆ, ಮುನ್ನೆಚ್ಚರಿಕಾ ವ್ಯಾಕ್ಸಿನ್(ಮೂರನೇ ಡೋಸ್) ಮಾತ್ರ ಶೇ.೨೭ ಜನರು ಪಡೆದಿದ್ದಾರೆ.
ಇನ್ನು ಈ ವ್ಯಾಕ್ಸಿನ್ ಹಾಕಿಸಿಕೊಳ್ಳಲು ರಾಜ್ಯದಲ್ಲಿ ೧.೫ ಕೋಟಿಗೂ ಹೆಚ್ಚಿನ ಜನ ಅರ್ಹತೆ ಪಡೆದಿದ್ದು, ಆದರೂ, ಮೂರನೇ ಡೋಸ್ ತೆಗೆದುಕೊಂಡಿಲ್ಲ. ಈ ಹಿನ್ನೆಲೆ, ಮತ್ತೆ ಮುನ್ನೆಚ್ಚರಿಕಾ ಲಸಿಕೆ ನೀಡಲು ಆರೋಗ್ಯ ಇಲಾಖೆ ಮುಂದಾಗಿದೆ.
೨೦೦ರ ಗಡಿ ದಾಟಿದ ಹೊಸ ಪ್ರಕರಣ : ೨೪ ಗಂಟೆಗಳಲ್ಲಿ ೭,೦೬೦ ಪರೀಕ್ಷೆಗಳನ್ನು ನಡೆಸಲಾಗಿದೆ. ಶೇ ೨.೮೪ರಷ್ಟು ಸೋಂಕು ದೃಢ ಪ್ರಮಾಣ ವರದಿಯಾಗಿದೆ. ಸಕ್ರಿಯ ಪ್ರಕರಣಗಳ ಸಂಖ್ಯೆ ೮೩೩ಕ್ಕೆ ಏರಿಕೆಯಾಗಿದೆ. ಈ ಪ್ರಕರಣಗಳಲ್ಲಿ ೭೮೩ ಮಂದಿ ಮನೆ ಆರೈಕೆಗೆ ಒಳಗಾಗಿದ್ದಾರೆ. ೧೫ ಮಂದಿ ತೀವ್ರ ನಿಗಾ ಘಟಕ ಹಾಗೂ ೩೫ ಮಂದಿ ಸಾಮಾನ್ಯ ಹಾಸಿಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರಲ್ಲಿ ೬೦ ಮಂದಿ ಚೇತರಿಸಿಕೊಂಡಿದ್ದಾರೆ. ಸೋಂಕಿತರಲ್ಲಿ ಮೈಸೂರಿನಲ್ಲಿ ೭೪ ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಉಸಿರಾಟ ಸಂಬಂಧಿ ಸಮಸ್ಯೆ ಕಾರಣ ಡಿ.೨೩ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಡಿ.೨೮ರಂದು ಮರಣ ಹೊಂದಿದ್ದಾರೆ. ಅವರು ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳನ್ನೂ ಎದುರಿಸುತ್ತಿದ್ದರು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ೨೭ ಜಿಲ್ಲೆಗಳಲ್ಲಿ ಹೊಸದಾಗಿ ಕೋವಿಡ್ ಪ್ರಕರಣಗಳು ದೃಢಪಟ್ಟಿವೆ. ಬೆಂಗಳೂರಿನಲ್ಲಿ ೨,೦೯೫ ಪರೀಕ್ಷೆಗಳನ್ನು ನಡೆಸಲಾಗಿದೆ. ೬೯ ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರಿಂದಾಗಿ ಬೆಂಗಳೂರಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ೪೯೫ಕ್ಕೆ ಏರಿಕೆಯಾಗಿದೆ. ಯಾದಗಿರಿ ಹಾಗೂ ವಿಜಯಪುರ ಬಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕೋವಿಡ್ ಸಕ್ರಿಯ ಪ್ರಕರಣಗಳಿವೆ
ವ್ಯಾಕ್ಸಿನ್ ಪಡೆಯಲು ಮನವಿ : ಕೋಮಾರ್ಬಿಟಿಸ್ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಹಾಗೂ ಯಾರು ಮೂರನೇ ಡೋಸ್ ವ್ಯಾಕ್ಸಿನ್ ಪಡೆದಿಲ್ಲ, ಅವರು ಕೂಡಲೇ ವ್ಯಾಕ್ಸಿನ್ ಹಾಕಿಸಿಕ್ಕೊಳ್ಳಲು ಸರ್ಕಾರ ಸೂಚಿಸಿದೆ. ಲಸಿಕೆಗಳನ್ನು ರಾಜ್ಯದಲ್ಲಿ ಎಲ್ಲ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಿಗೆ ವ್ಯಾಕ್ಸಿನ್ ನೀಡಲು ಮುಂದಾಗಿದೆ.
೩೦ ಸಾವಿರ ವ್ಯಾಕ್ಸಿನ್ ಖರೀದಿ : ಪ್ರಾಥಮಿಕ ಹಂತದಲ್ಲಿ ೩೦ ಸಾವಿರ ಕೋರ್ಬಿವಾಕ್ಸ್ ಲಸಿಕೆ ಖರೀದಿಗೆ ಸರ್ಕಾರ ಮುಂದಾಗಿದೆ. ಒಂದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆ ಹಾಗೂ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮೂರನೇ ಡೋಸ್ ಪಡೆಯವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಹೆಚ್ಚುತ್ತಿರುವ ಜೆಎನ್೧ ಸೋಂಕು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ದಾಖಲಾಗುತ್ತಿರುವ ಹೊಸ ಕೊರೋನಾ ಪ್ರಕರಣಗಳಲ್ಲಿ ಶೇ.೯೦ ರಷ್ಟು ಒಮಿಕ್ರಾನ್ ರೂಪಾಂತರಿ ಜೆಎನ್.೧ ಅಂಶ ಪತ್ತೆಯಾಗುತ್ತಿದ್ದು, ಈಗಾಗಲೇ ಆರೋಗ್ಯ ಇಲಾಖೆ ೧೯೭ ಸ್ಯಾಂಪಲ್ಸ್‌ಗಳನ್ನು ಜೀನೋಮ್ ಸೀಕ್ವೆನ್ಸಿಂಗ್ ಮಾಡಲು ಕಳುಹಿಸಿದೆ. ೬೦ ಸ್ಯಾಂಪಲ್ಸ್‌ಗಳ ವರದಿ ಪ್ರಕಾರ ಶೇ.೫೦ ರಷ್ಟು ರೋಗಿಗಳಲ್ಲಿ ಜೆಎನ್೧ ಅಂಶ ಕಂಡು ಬಂದಿದೆ.