ವರದಿ: ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಹಿರಿಯ ನಾಗರಿಕರನ್ನು ನಾವು ಗೌರವದಿಂದ ಕಾಣುವ ಜೊತೆಗೆ ಅವರ ಆರೋಗ್ಯದ ಕಾಳಜಿ ವಹಿಸುವ ಅಗತ್ಯವಿದೆ ಎಂದು ಪಿರಿಯಾಪಟ್ಟಣ ಲಯನ್ಸ್ ಸಂಸ್ಥೆ ಅಧ್ಯಕ್ಷ ಪಿ.ಕೆ ಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಪಿರಿಯಾಪಟ್ಟಣ ಲಯನ್ಸ್ ಕ್ಲಬ್ ವತಿಯಿಂದ ಏರ್ಪಡಿಸಿದ್ದ ವಿಶ್ವ ಹಿರಿಯ ನಾಗರೀಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು, ಇತ್ತೀಚೆಗೆ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದೆ, ಹಿರಿಯ ನಾಗರಿಕರು ವಯೋಸಹಜ ಕಾಯಿಲೆಗಳ ಜೊತೆಗೆ ಮಾನಸಿಕ ಹೊಯ್ದಾಟದಿಂದ ಕುಟುಂಬದವರೊಂದಿಗೆ ಕಠಿಣವಾಗಿ ವರ್ತಿಸ ತೊಡಗಿದರೆ ಇದನ್ನೇ ನೆಪವಾಗಿಸಿಕೊಂಡು ವೃದ್ದಾಶ್ರಮಕ್ಕೆ ಸೇರಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆ. ವೃದ್ಧಾಶ್ರಮಗಳು ಹೆಚ್ಚಾಗುವುದು ನಾಗರಿಕ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಈ ವೇಳೆ ತಾಲ್ಲೂಕಿನಲ್ಲಿ ವಿವಿದ ಕ್ಷೇತ್ರಗಳಲ್ಲಿ ಸಾಧನೆಗೈದ ಐವರನ್ನು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿದ ಅಣ್ಣಯ್ಯಶೆಟ್ಟಿ ಅವರು ಮಾತನಾಡಿ ಹಿರಿಯ ನಾಗರಿಕರನ್ನು ಅನಾದಾರದಿಂದ ಕಾಣುವ ಪ್ರವೃತ್ತಿ ಹೆಚ್ಚಾಗುತ್ತಿದೆ, ಶಾಲಾ ಕಾಲೇಜುಗಳಲ್ಲಿ ಹಿರಿಯರಿಗೆ ಗೌರವ ಕೊಡುವ ಸಂಸ್ಕೃತಿಯನ್ನು ಹೇಳಿಕೊಡುವ ಅಗತ್ಯವಿದೆ, ಸರ್ಕಾರಗಳು ಸಹ ಹಿರಿಯ ನಾಗರಿಕರಿಗೆ ಹೆಚ್ಚಿನ ಸವಲತ್ತುಗಳನ್ನು ಒದಗಿಸುವತ್ತ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಲಯನ್ಸ್ ಸಂಸ್ಥೆ ಕಾರ್ಯದರ್ಶಿ ಜೆ.ಗಿರೀಶ್, ಖಜಾಂಚಿ ಲವಕುಮಾರ್, ವಲಯಾಧ್ಯಕ್ಷ ಕೆ.ಎ ಮಹದೇವಪ್ಪ, ಸದಸ್ಯರಾದ ಮಂಜುನಾಥ್ ಸಿಂಗ್, ವಿಜಯಕುಮಾರ್, ವಿನೋದ್ ಕುಮಾರ್, ಪುರಸಭಾ ಸದಸ್ಯ ಪಿ.ಸಿ ಕೃಷ್ಣ, ಮುರಳಿ, ಕುಮಾರಸ್ವಾಮಿ, ರಾಜಶೇಖರ್, ಶ್ರೀನಿವಾಸಯ್ಯ ಇದ್ದರು.