ಬೆಂಗಳೂರು: ದೇಶಾದ್ಯಂತ ಮಾರುಕಟ್ಟೆಯಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟವಾಗುತ್ತಿದೆ. ದೇಶದ ಮಾರುಕಟ್ಟೆಗಳಲ್ಲಿ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟದ ಬಗ್ಗೆ ಕಳೆದ ಕೆಲವು ದಿನಗಳಿಂದ ರಾಷ್ಟ್ರೀಯ ಗ್ರಾಹಕ ಸಹಾಯವಾಣಿಗೆ ಅನೇಕ ದೂರುಗಳು ಬಂದಿವೆ. ಹೀಗಾಗಿ ಇದರ ವಿರುದ್ಧ ತ್ವರಿತ ಕ್ರಮಕೈಗೊಳ್ಳಿ ಎಂದು ಎಂದು ಸಚಿವ ಪ್ರಹ್ಲಾದ ಜೋಶಿ ಅವರು ಸಚಿವ ಜೆ.ಪಿ.ನಡ್ಡಾಗೆ ಪತ್ರದ ಮೂಲಕ ಮನವಿ ಮಾಡಿಕೊಂಡಿದ್ದಾರೆ.
ಫಾಸ್ಟ್ ಫುಡ್ ಕೇಂದ್ರಗಳು, ರೆಸ್ಟೋರೆಂಟ್‌ಗಳು ಇತರೆಡೆ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮಾಡಲಾಗುತ್ತಿದೆ. ವಿಶೇಷವಾಗಿ ಪನೀರ್ ಪೌಷ್ಠಿಕಾಂಶಯುಕ್ತ ಆಹಾರ ಪದಾರ್ಥವಾಗಿದ್ದರಿಂದ ಇದನ್ನು ಗಮನಿಸಿರುವ ಅನೇಕ ಸಾರ್ವಜನಿಕರು ಗ್ರಾಹಕ ಸಹಾಯವಾಣಿ ಮೂಲಕ ವ್ಯಾಪಕವಾಗಿ ದೂರು ಸಲ್ಲಿಸಿ ಗಮನ ಸೆಳೆದಿದ್ದಾರೆ. ಕಲಬೆರಕೆ ಪನೀರ್ ಸೇವನೆಯಿಂದ ಜನರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಗ್ರಾಹಕರು ನೀಡಿದ ದೂರಿನಲ್ಲಿ ತೀವ್ರ ಕಳವಳ ಸಹ ವ್ಯಕ್ತಪಡಿಸಿದ್ದಾರೆ.
ಅಲ್ಲದೇ, ಆಹಾರ ಗುಣಮಟ್ಟ ಮತ್ತು ಸುರಕ್ಷತೆಗಾಗಿ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜನರ ದುಗುಡವನ್ನು ತಮ್ಮ ಗಮನಕ್ಕೆ ತರಬಯಸಿದ್ದೇನೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ. ಗ್ರಾಹಕರು ರಾಷ್ಟ್ರೀಯ ಗ್ರಾಹಕ ಸಹಾಯವಾಣಿ ಪೋರ್ಟಲ್‌ನಲ್ಲಿ ಹಲವು ದೂರುಗಳನ್ನು ದಾಖಲಿಸಿದ್ದಾರೆ.
ಇದು ದೇಶಾದ್ಯಂತ ನಕಲಿ ಮತ್ತು ಕಲಬೆರಕೆ ಪನೀರ್ ಮಾರಾಟ ಮತ್ತು ಬಳಕೆ ಹೆಚ್ಚುತ್ತಿರುವ ಪ್ರವೃತ್ತಿಯನ್ನು ಎತ್ತಿ ತೋರಿಸುತ್ತದೆ. ಅಂತಹ ನಕಲಿ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಸೇವನೆಯು ಜನರ ತೀವ್ರ ಮತ್ತು ದೀರ್ಘ ಕಾಲದ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಹಾಗಾಗಿ ಇದರ ವಿರುದ್ಧ ಕ್ರಮಕೈಗೊಳ್ಳಿ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಪನೀರ್ ಉತ್ಪಾದನಾ ಸಂಸ್ಥೆಗಳು ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006ರ ಪ್ರಕಾರ ಆಹಾರ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಅವರು ಒತ್ತಾಯಿಸಿದ್ದಾರೆ.