Friday, April 18, 2025
Google search engine

Homeರಾಜ್ಯರೈತರಿಗೆ ಶೂನ್ಯ ಬಡ್ಡಿ ದರದ ಸಾಲ ಮಿತಿ ಹೆಚ್ಚಳ

ರೈತರಿಗೆ ಶೂನ್ಯ ಬಡ್ಡಿ ದರದ ಸಾಲ ಮಿತಿ ಹೆಚ್ಚಳ

ಬೆಂಗಳೂರು:- ರಾಜ್ಯದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ನೀಡುವ ಅಲ್ಪಾವ ಸಾಲದ ಮಿತಿಯನ್ನು 3ಲಕ್ಷದಿಂದ 5ಲಕ್ಷ ರೂ.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಪ್ರಕಟಿಸಿದರು. 2023-24ನೇ ಸಾಲಿನ ಆಯವ್ಯಯವನ್ನು ವಿಧಾನಸಭೆಯಲ್ಲಿ ಮಂಡಿಸಿದ ಅವರು, ಶೇ.3ರ ಬಡ್ಡಿ ದರದಲ್ಲಿ ನೀಡುವ ಮಧ್ಯಾವದಿ , ದೀರ್ಘಾವದಿ ಸಾಲದ ಮಿತಿಯನ್ನು 10 ಲಕ್ಷದಿಂದ 15 ಲಕ್ಷದವರೆಗೆ ಹೆಚ್ಚಿಸಲಿದ್ದು, ಪ್ರಸಕ್ತ ಸಾಲಿನಲ್ಲಿ 35 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂ.ಗಳಷ್ಟು ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದರು.

ಎಪಿಎಂಸಿ ಕಾಯ್ದೆ ವಾಪಸ್: ರೈತ ವಿರೋಧಿ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಲು ನಿರ್ಧರಿಸಿರುವುದಾಗಿ ಪ್ರಕಟಿಸಿದ ಮುಖ್ಯಮಂತ್ರಿ, ಹಿಂದಿನ ಸರ್ಕಾರ ಎಪಿಎಂಸಿ ಕಾಯ್ದೆಗೆ ತಿದ್ದುಪಡಿ ಮಾಡುವ ಮೂಲಕ ಸದೃಢ ಮಾರುಕಟ್ಟೆ ಜಾಲವನ್ನು ದುರ್ಬಲಗೊಳಿಸಿ ಎಪಿಎಂಸಿಗಳ ಮೇಲೆ ಅವಲಂಬಿತವಾಗಿದ್ದ ಲಕ್ಷಾಂತರ ರೈತರ ಬದುಕಿನ ಅನಿಶ್ಚಿತತೆಗೆ ಕಾರಣವಾಗಿದೆ.

ಕಾಯ್ದೆ ತಿದ್ದುಪಡಿಗೆ ಮೊದಲು 2018-19ರಲ್ಲಿ ರಾಜ್ಯದ 167 ಕೃಷಿ ಉತ್ಪನ್ನ ಮಾರುಕಟ್ಟೆಗಳ ಒಟ್ಟು ಆದಾಯ 570ರಿಂದ 600 ಕೋಟಿ ರೂ.ಗಳಷ್ಟಿತ್ತು. ಕಾಯ್ದೆಯ ತಿದ್ದುಪಡಿ ನಂತರ 2022-23ರಲ್ಲಿ ಈ ಆದಾಯ 93 ಕೋಟಿ ರೂ.ಗಳಿಗೆ ಕುಸಿದಿದೆ. ಅಲ್ಲದೆ ಮುಕ್ತ ಮಾರುಕಟ್ಟೆಯಲ್ಲಿ ಖಾಸಗಿ ಸಂಸ್ಥೆಗಳು ರೈತರನ್ನು ವಂಚಿಸಿದ ಶೋಷಣೆಗೆ ಒಳಪಡಿಸಿದ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಇವೆ. ಈ ಅವ್ಯವಸ್ಥೆಯನ್ನು ಸರಿಪಡಿಸಿ ರೈತರ ಹಿತ ಕಾಯಲು ಕಾಯ್ದೆಯನ್ನು ವಾಪಸ್ ಪಡೆಯಲು ತೀರ್ಮಾನಿಸಿರುವುದಾಗಿ ಅವರು ಹೇಳಿದರು.

ಕಾಯಕ ನಿಧಿ ಯೋಜನೆಯಡಿ ಎಪಿಎಂಸಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಮಾಲರು ಮರಣ ಹೊಂದಿದರೆ ನೀಡುವ ಶವಸಂಸ್ಕಾರದ ಮೊತ್ತವನ್ನು 10ಸಾವಿರದಿಂದ 25 ಸಾವಿರದವರೆಗೆ ಹೆಚ್ಚಿಸುವುದಾಗಿ ಹೇಳಿದರು. ರೈತರು ಗೋದಾಮು ನಿರ್ಮಿಸಲು ಬ್ಯಾಂಕುಗಳು ನೀಡುವ 20 ಲಕ್ಷ ರೂ.ವರೆಗಿನ ಸಾಲಕ್ಕೆ ರಾಜ್ಯ ಸರ್ಕಾರ ಶೇ.7ರಷ್ಟು ಬಡ್ಡಿ ಸಹಾಯಧನ ನೀಡಲಿದೆ. ಗುಡ್ಡಗಾಡು ಪ್ರದೇಶಗಳ ರೈತರ ಕೃಷಿ ಉತ್ಪನ್ನ ಮತ್ತು ಪರಿಕರಗಳ ಸಾಗಾಣಿಕೆಗಾಗಿ ಪಿಕ್‍ಅಪ್ ವ್ಯಾನ್ ಖರೀದಿಸಲು 7 ಲಕ್ಷ ರೂ.ವರೆಗಿನ ಸಾಲವನ್ನು ಶೇ.4ರ ಬಡ್ಡಿ ದರದಲ್ಲಿ ವಿತರಿಸಲಾಗುವುದು.

ಶೀಘ್ರ ಹಾಳಾಗುವ ಹಣ್ಣು, ಹೂ, ತರಕಾರಿಗಳಿಗೆ ನ್ಯಾಯಯುತ ಬೆಲೆ ಒದಗಿಸಲು ರಾಜ್ಯದ ಆಯ್ದ 50 ತರಕಾರಿ ಮಾರುಕಟ್ಟೆಗಳಲ್ಲಿ ಮಿನಿ ಶೀಥಲಗೃಹ ಸ್ಥಾಪಿಸಲಾಗುವುದು. ರಾಜ್ಯ ಕೃಷಿ ಉತ್ಪನ್ನಗಳ ಮಾರುಕಟ್ಟೆಗಳನ್ನು ಬಲಪಡಿಸಿ ಆನ್‍ಲೈನ್ ಮಾರುಕಟ್ಟೆ ವ್ಯವಸ್ಥೆಯನ್ನು ದೇಶದಲ್ಲೇ ಮೊದಲ ಬಾರಿಗೆ ಜಾರಿಗೊಳಿಸಲಾಗುವುದು.

RELATED ARTICLES
- Advertisment -
Google search engine

Most Popular