ಹೊಸೂರು: ಬರಗಾಲದ ಹಿನ್ನಲೆಯಲ್ಲಿ ಹೈನುಗಾರಿಕೆ ರೈತರಿಗೆ ನೀಡುತ್ತಿರುವ ಹಾಲಿನ ಪ್ರೋತ್ಸಾಹ ಧನವನ್ನು 5 ರೂಗಳಿಂದ 8 ರೂಗಳಿಗೆ ಹೆಚ್ಚಿಸುವಂತೆ ರಾಜ್ಯ ಸರ್ಕಾರವನ್ನು ಹಳಿಯೂರು ಬಡಾವಣೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಎಚ್.ಆರ್.ಕೃಷ್ಣಮೂರ್ತಿ ಒತ್ತಾಯಿಸಿದರು
ಸಾಲಿಗ್ರಾಮ ತಾಲೂಕಿನ ಹಳಿಯೂರು ಬಡಾವಣೆ ಹಾಲು ಉತ್ಪಾದಕರ ಸಂಘದ 2022-23 ನೇ ಸಾಲಿನ ಸರ್ವ ಸದಸ್ಯರ ಮಹಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು
ಜಿಲ್ಲಾ ಹಾಲು ಒಕ್ಕೂಟವು ಹಾಲಿನ ದರವನ್ನು 35 ರೂಗಳಿಗೆ ಏರಿಕೆ ಮಾಡಿದ್ದರು ಪಶುಆಹಾರ ಮತ್ತು ಮೇವಿನ ದರ ಏರಿಕೆಯಾಗುತ್ತಿದ್ದು ರೈತರಿಗೆ ಸಾಕಷ್ಟು ಹೊರೆಯಾಗುತ್ತಿದೆ ಇದನ್ನು ತಪ್ಪಿಸಲು ಪಶು ಆಹಾರ ದರವನ್ನು ಇನ್ನಷ್ಟು ಕಡಿಮೆ ರಿಯಾಯಿತಿ ದರದಲ್ಲಿ ನೀಡುವಂತೆ ಮನವಿ ಮಾಡಿದರು.
ಸಂಘದ ವ್ಯಾಪ್ತಿಯ ಹೈನುಗಾರಿಕೆ ರೈತರು ಉತ್ತಮ ಗುಣಮಟ್ಟದ ಹಾಲನ್ನು ಸರಬರಾಜು ಮಾಡಿ ಇದರಿಂದ ಸಂಘವು ಅಭಿವೃದ್ದಿ ಹೊಂದಲು ಸಾಧ್ಯವಾಗಲಿದ್ದು ಮುಂದಿನ ದಿನಗಳಲ್ಲಿ ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಹಾಲು ಒಕ್ಕೂಟದ ವಿಸ್ತರಣಾಧಿಕಾರಿ ದುಶ್ಯಂತ್ ಮಾತನಾಡಿ, ಪ್ರತಿ 15 ದಿನಗಳಿಗೊಮ್ಮೆ ಹಣ ಏಕೈಕ ಉದ್ಯಮ ಹೈನುಗಾರಿಕೆ ಆಗಿದ್ದು ಡೈರಿಗಳ ಮೂಲಕ ವಿತರಣೆ ಮಾಡುವ ಪಶು ಆಹಾರ ಮತ್ತು ಖನಿಜ ವಿಶ್ರಣವನ್ನು ಪಶುಗಳಿಗೆ ನೀಡಿ ಖಾಸಗಿ ಪಶು ಆಹಾರವನ್ನು ನಿಯಂತ್ರಣ ಮಾಡಿದರೇ ಪಶುಗಳ ಆರೋಗ್ಯ ಕಾಪಾಡಿ ಉತ್ತಮ ಹಾಲು ಇಳುವರಿ ಪಡೆಯಲು ಸಾಧ್ಯವಾಗುತ್ತದೆ ಎಂದರು.
ಕೆ.ಆರ್.ನಗರ ಸರ್ಕಾರಿ ನೌಕರರ ಉಪಾಧ್ಯಕ್ಷ ಹೊಸೂರು ಎ.ಕುಚೇಲ್ ಡೈರಿ ಅಭಿವೃದ್ದಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವಿವರಣೆ ನೀಡಿ ಮಾತಾಡಿದರು.ಸಂಘದ ಕಾರ್ಯದರ್ಶಿ ಎಚ್.ಪಿ.ರಾಜೇಶ್ ಪುಟ್ಟೇಗೌಡ ಆಡಿಟ್ ವರದಿ ಮಂಡಿಸಿ ಅನುಮೋದನೆ ಪಡೆದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಎಚ್.ಕೆ.ವಿಕ್ರಮ್ ಗೌಡ, ನಿರ್ದೇಶಕರಾದ ಎಚ್.ಬಿ.ಜಯಣ್ಣ, ಅಜಯ್ ಮಹಾಪ್ರಭು, ಚಂದ್ರ, ನಾಗರಾಜು, ಭರತ್ ರಾಜು, ಡಿ.ಜಿ.ಕೃಷ್ಣ, ಲೀಲಾವತಿ ರೇವಣ್ಣ, ಹಾಲು ಪರೀಕ್ಷ ಎಚ್.ಆರ್.ಕೀರ್ತಿ ಸೇರಿದಂತೆ ಮತ್ತಿತರರು ಹಾಜರಿದ್ದರು.