ಮಂಡ್ಯ: ಜಿಲ್ಲೆಯಲ್ಲಿ ಅತಿವೃಷ್ಟಿ / ಅನಾವೃಷ್ಟಿ ಅಕಾಲಿಕ ಮಳೆ ಮುಂತಾದ ಪ್ರಕೃತಿ ವಿಕೋಪಗಳು ಸೇರಿದಂತೆ ಅನೇಕ ಕಾರಣಗಳಿಂದ ಬೆಳೆ ನಷ್ಟವಾಗುತ್ತಿರುವುದರಿಂದ ರೈತರಿಗೆ ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಜಾಗೃತಿ ಮೂಡಿಸಿ ಎಂದು ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜುರವರು ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಬೆಳೆ ವಿಮಾ ಯೋಜನೆ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರೈತರ ಹಿತ ದೃಷ್ಟಿಯಿಂದ ರೈತ ಸುರಕ್ಷಾ- ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ ಜಾರಿಗೆ ತರಲಾಗಿದೆ. ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆಗಳಿಗೆ ಸಂಬಂಧಿಸಿದಂತೆ ಯಾವ ಯಾವ ಬೆಳೆಗಳನ್ನು ಬೆಳೆದರೆ ಉತ್ತಮ ಲಾಭ ಸಿಗುತ್ತದೆ ಹಾಗೂ ಯಾವ ಬೆಳೆಯ ಮೇಲೆ ವಿಮೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ಇದರ ಬಗ್ಗೆ ಅರಿವು ಮೂಡಿಸಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.
ಮಂಡ್ಯ ಜಿಲ್ಲೆಗೆ ಸಂಬಂಧಿಸಿದಂತೆ ಎಸ್.ಬಿ.ಐ ಜನರಲ್ ಇನ್ಸೂರೆನ್ಸ್ ಕಂಪನಿ ಬೆಂಗಳೂರು ಸಂಸ್ಥೆಯನ್ನು ವಿಮಾ ಸಂಸ್ಥೆಯಾಗಿ ನಿಗದಿಪಡಿಸಲಾಗಿದೆ. ಇದರ ಅನುಸಾರವಾಗಿ ರೈತರು ಸಂಬಂಧಪಟ್ಟ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ, ಅಥವಾ ಗ್ರಾಮಒನ್ ಕೇಂದ್ರಗಳಲ್ಲಿ ನಿಗದಿತ ದಿನಾಂಕದೊಳಗೆ ವಿಮಾ ಕಂತನ್ನು ಪಾವತಿ ಮಾಡಬೇಕಾಗಿರುತ್ತದೆ ಎಂದರು. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಮದ್ದೂರು, ಮಂಡ್ಯ ನಾಗಮಂಗಲ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅನುಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಹುರುಳಿ (ಮಳೆ ಆಶ್ರಿತ) ಬೆಳೆಗೆ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಿ ಹಾಗೂ ಬೇಸಿಗೆ ಹಂಗಾಮಿಗೆ ಮಂಡ್ಯ, ಪಾಂಡವಪುರ ಮತ್ತು ಶ್ರೀರಂಗಪಟ್ಟಣ ತಾಲ್ಲೂಕುಗಳ ಅಧಿಸೂಚಿತ ಗ್ರಾಮ ಪಂಚಾಯಿತಿಗಳಲ್ಲಿ ಭತ್ತ (ನೀರಾವರಿ) ಬೆಳೆಗೆ ರೈತರು ಬೆಳೆ ವಿಮೆಗೆ ನೊಂದಾಯಿಸಿಕೊಳ್ಳಿ ಎಂದರು.
ಹೋಬಳಿ ಮಟ್ಟದಲ್ಲಿ ಹಿಂಗಾರು ಹಂಗಾಮಿಗೆ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ), ರಾಗಿ (ನೀರಾವರಿ), ರಾಗಿ (ಮಳೆ ಆಶ್ರಿತ) ಮತ್ತು ಹುರುಳಿ (ಮಳೆ ಆಶ್ರಿತ) ಬೆಳೆಗಳಿಗೆ ರೈತರು ಬೆಳೆ ವಿಮೆ ನೋಂದಾಯಿಸಿಕೊಳ್ಳಿ ಹಾಗೂ ಪಾಂಡವಪುರ ತಾಲ್ಲೂಕಿನ ಚಿನುಕುರುಳಿ ಮೇಲುಕೋಟೆ ಮತ್ತು ಕಸಬಾ ಹೋಬಳಿಗಳಲ್ಲಿ ಟೊಮ್ಯೊಟೋ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಿ ಹಾಗೂ ಬೇಸಿಗೆ ಹಂಗಾಮಿಗೆ ಅಧಿಸೂಚಿತ ಹೋಬಳಿಗಳಲ್ಲಿ ಭತ್ತ (ನೀರಾವರಿ) ಮತ್ತು ರಾಗಿ (ನೀರಾವರಿ) ಬೆಳೆಗಳಿಗೆ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಿ ಹಾಗೂ ಪಾಂಡವಪುರ ತಾಲ್ಲೂಕಿನ ಮೇಲುಕೋಟೆ ಹೋಬಳಿಗಳಲ್ಲಿ ಟೊಮ್ಯೊಟೋ ಬೆಳೆಗೆ ವಿಮೆ ನೋಂದಾಯಿಸಿಕೊಳ್ಳಿ ಎಂದರು.
ಜಂಟಿ ಕೃಷಿ ನಿರ್ದೇಶಕರಾದ ಅಶೋಕ್ ಎಸ್.ವಿ ರವರು ಮಾತನಾಡಿ ಹನಿ ನೀರಾವರಿ ಬಳಸಿ ಉತ್ತಮ ಇಳುವರಿ ಕಬ್ಬನ್ನು ಬೆಳೆಯಬಹುದು ಹನಿ ನೀರಾವರಿ ಬಳಸಿ ಕಬ್ಬನು ಬೆಳೆದ ರೈತರಿಗೆ ಶೇ ೪೫ ರಿಂದ ೯೦ ರಷ್ಟು ಸಹಾಯಧನವನ್ನು ಕೃಷಿ ಇಲಾಖೆಯಿಂದ ಭರಿಸಲಾಗುವುದು ಎಂದರು. ಇದೇ ಸಂದರ್ಭದಲ್ಲಿ ಹಿರಿಯ ಕೃಷಿ ವಿಜ್ಞಾನಿಗಳಾದ ಡಾ.ನರೇಶ್, ಬೇಸಾಯ ಶಾಸ್ತ್ರಜ್ಞರಾದ ಡಾ. ಕೇಶವಯ್ಯ, ಪಾಂಡವಪುರ ಉಪ ಕೃಷಿ ನಿರ್ದೇಶಕರಾದ ಮಮತಾ,ಮಂಡ್ಯ ಉಪ ಕೃಷಿ ನಿರ್ದೇಶಕರಾದ ಮಾಲತಿ, ಎಲ್ಲಾ ತಾಲ್ಲೂಕು ಮಟ್ಟದ ತಹಶೀಲ್ದಾರ್ ಗಳು ಸೇರಿದಂತೆ ಎಲ್ಲಾ ತಾಲ್ಲೂಕುಗಳ ಸಹಾಯಕ ಕೃಷಿ ನಿರ್ದೇಶಕರುಗಳು ಹಾಜರಿದ್ದರು.