ಮಂಗಳೂರು (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದ ಕೊರಿಂಗಿಲ ಜುಮಾ ಮಸೀದಿಯಲ್ಲಿ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಮಸೀದಿಯ ಖತೀಬ್ ಅಲ್ ಹಾಜ್ ಅಯ್ಯೂಬ್ ವಹಾಬಿ ಗಡಿಯಾರ್ ಪ್ರಾರ್ಥನೆಗೈದು ಪ್ರಾಸ್ತಾವಿಕವಾಗಿ ಮಾತನಾಡಿದರು.
ಮಸೀದಿ ಅಧ್ಯಕ್ಷ ಮುಹಮ್ಮದ್ ಕುಂಞಿ ಹಾಜಿ ನೇತೃತ್ವದಲ್ಲಿ ಧ್ವಜಾರೋಹಣ ಮಾಡಲಾಯಿತು. ಎಸ್ ಕೆ ಎಸ್ ಬಿವಿ ಅಧ್ಯಕ್ಷ ಸುಹೈಬ್ ನೇತೃತ್ವದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳಾದ ಸುಹೈಬ್, ಮುಹಮ್ಮದ್ ರಬೀಹ್ ಅವರು ಆಜಾದಿ ಹಾಡನ್ನು ಹಾಡಿದರು. ಇದೇ ವೇಳೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಕೊನೆಗೆ ಸಿಹಿತಿಂಡಿ ವಿತರಿಸಿ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಯಿತು. ಎಂಐಎಸ್ ಗಲ್ಫ್ ಸಂಘಟನೆ ಹಾಗೂ ಸ್ವಲಾತ್ ಕಮಿಟಿ, ಮಸೀದಿ ಆಡಳಿತ ಮಂಡಳಿಯ ಪದಾಧಿಕಾರಿಗಳು ಹಾಜರಿದ್ದರು. ಜಿಕೆ ಅಬೂಬಕರ್ ಮದನಿ ಗಡಿಯಾರ್ ಧನ್ಯವಾದಗೈದರು.