ಅಹಮದಾಬಾದ್: ಇಂದು ಭಾನುವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಫೈನಲ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ಹಣಾಹಣಿಯ ಬಿಸಿ ಕೇವಲ ಅಹಮದಾಬಾದಿಗಷ್ಟೇ ಅಲ್ಲ ಇಡೀ ದೇಶವನ್ನೇ ಆವರಿಸಿದೆ. ಭಾರತ ವಿಶ್ವಕಪ್ ಗೆಲ್ಲುವ ವಿಶ್ವಾಸದಲ್ಲಿದೆ. ದೇಶಾದ್ಯಂತ ಕೊಟ್ಯಾಂತರ ಜನರು ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ. ಸಂಭ್ರಮ ಆಚರಣೆಗೆ ಸಿದ್ದತೆ ನಡೆಸುತ್ತಿದ್ದಾರೆ. ಪಟಾಕಿ ಖರೀದಿಸುತ್ತಿದ್ದಾರೆ. ರಸ್ತೆಯ ಇಕ್ಕೆಲಗಳಲ್ಲಿರುವ ಗೋಡೆ, ಕಂಬಗಳು ಮತ್ತು ವಾಹನಗಳ ಮೇಲೆ `ಜೀತೇಗಾ ಭಾರತ್’ (ಜಯಿಸಲಿದೆ ಭಾರತ) ಎಂಬ ಬರಹಗಳು ಹಲವು ಬಣ್ಣಗಳಲ್ಲಿ ಕಣ್ಮನ ಸೆಳೆಯುತ್ತಿವೆ. ಕ್ರೀಡಾಂಗಣದಲ್ಲಿ ಸೇರಲಿರುವ ೧.೩೦ ಲಕ್ಷ ಪ್ರೇಕ್ಷಕರಿಗಾಗಿ ಕೇಸರಿ ಬಣ್ಣದಲ್ಲಿ ಕಂಗೊಳಿಸುತ್ತಿರುವ ಕುರ್ಚಿಗಳೂ ಸಿದ್ಧವಾಗಿವೆ. ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿ ರೋಹಿತ್ ಶರ್ಮಾ ಬಳಗವು ಟ್ರೋಫಿ ಎತ್ತಿ ಹಿಡಿಯುವುದೇ ಎಂಬ ಮಾತುಗಳೇ ಎಲ್ಲೆಡೆ ಕೇಳಿ ಬರುತ್ತಿವೆ. ಲೀಗ್ ಹಂತದ ಎಲ್ಲ ಒಂಬತ್ತು ಪಂದ್ಯಗಳನ್ನು ಮತ್ತು ಸೆಮಿಫೈನಲ್‌ನಲ್ಲಿ ಭರ್ಜರಿ ಜಯದೊಂದಿಗೆ ಇಲ್ಲಿಗೆ ಬಂದಿರುವ ಭಾರತವೇ ಗೆಲ್ಲುವ ಫೆವರಿಟ್ ತಂಡವಾಗಿದೆ.
ಏಕೆಂದರೆ; ಈ ತಂಡವು ಇದುವರೆಗೆ ಆಡಿರುವ ಆಟವೇ ಆ ರೀತಿಯದ್ದು. ಹಿಂದೆಂದೂ ಕಾಣದಂತಹ ಆಟ ಇದು ಎಂದು ದಿಗ್ಗಜ ಕ್ರಿಕೆಟಿಗರೇ ಬಾಯ್ತುಂಬ ಹೊಗಳಿದ್ದಾರೆ. ಈ ರೀತಿಯ ಆಟ ಮೂಡಿಬರಲು ಏನು ಕಾರಣಗಳಿರಬಹುದು? ೨೦೧೧ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ರೋಹಿತ್ ಶರ್ಮಾ ಆಯ್ಕೆಯೇ ಆಗಿರಲಿಲ್ಲ. ಈಗ ಅವರೇ ನಾಯಕರಾಗಿದ್ದಾರೆ. ೩೬ ವರ್ಷದ ರೋಹಿತ್ ಅವರಿಗೆ ಬಹುಶಃ ಇದು ಕೊನೆಯ ವಿಶ್ವಕಪ್ ಟೂರ್ನಿಯೂ ಹೌದು. ಅವರು ಈ ವಿಶ್ವ ವಿಜಯಕ್ಕಾಗಿ ಹಂಬಲಿಸಿರುವುದನ್ನು ಬ್ಯಾಟಿಂಗ್ ಮೂಲಕ ತೋರಿಸುತ್ತಿದ್ದಾರೆ. ಮೊದಲ ಪಂದ್ಯದಲ್ಲಿ ಇದೇ ಆಸ್ಟ್ರೇಲಿಯಾ ಎದುರು ಸೊನ್ನೆ ಸುತ್ತಿದ್ದ ರೋಹಿತ್ ನಂತರದ ಪಂದ್ಯಗಳಲ್ಲಿ ಸ್ಫೋಟಕ ಆರಂಭ ನೀಡಿದ್ದಾರೆ. ಹೊಸಚೆಂಡಿನೊಂದಿಗೆ ದಾಳಿಗಿಳಿಯುವ ಬೌಲರ್‌ಗಳ ಚಳಿ ಬಿಡಿಸಿದ್ದಾರೆ.
ಇನ್ನು ಯುವ ಆಟಗಾರ ಶುಭಮನ್ ಗಿಲ್ ೧೯ ವರ್ಷದೊಳಗಿನವರ ವಿಶ್ವಕಪ್ ವಿಜೇತ ತಂಡದ ಆಟಗಾರ. ಸೀನಿಯರ್ ತಂಡದ ಟ್ರೋಫಿಗೂ ಮುತ್ತಿಡುವ ಕನಸು ಈ ಹುಡುಗನದ್ದು. ಗಾಯದ ಕಾರಣಕ್ಕೆ, ಫಾರ್ಮ್ ಕೊರತೆಯಿಂದಾಗಿ ಅಪಾರ ಟೀಕೆಗಳನ್ನು ಎದುರಿಸಿಯೂ ಮರಳಿ ಬಂದು ವಿಕೆಟ್‌ಕೀಪಿಂಗ್‌ನಲ್ಲಿ ಮಿಂಚುತ್ತಿರುವ ಕನ್ನಡಿಗ ಕೆ.ಎಲ್. ರಾಹುಲ್, ಬೆಂಕಿಚೆಂಡುಗಳನ್ನೇ ಪ್ರಯೋಗಿಸುತ್ತಿರುವ ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಮಿಂಚಿನ ಫೀಲ್ಡರ್ ಮತ್ತು ಆಲ್‌ರೌಂಡರ್ ರವೀಂದ್ರ ಜಡೇಜ, ಛಲದಂಕಮಲ್ಲ ಕುಲದೀಪ್ ಯಾದವ್, ಹೈದರಾಬಾದಿ ಮುತ್ತು ಮೊಹಮ್ಮದ್ ಸಿರಾಜ್ ಅವರಿಗೆ ಮೊದಲ ವಿಶ್ವಕಪ್ ಕಪ್ ಗೆಲ್ಲುವ ಛಲ. ರನ್ ಯಂತ್ರ ವಿರಾಟ್ ಕೊಹ್ಲಿ ಅವರಿಗೆ ತಮ್ಮ ಅನುಭವವನ್ನು ಧಾರೆ ಎರೆದು ಎರಡನೇ ಬಾರಿ ವಿಶ್ವಕಪ್ ಗೆದ್ದ ತಂಡದ.
ಈ ಭಾವನಾತ್ಮಕ ಅಂಶಗಳು, ಪ್ರತಿಭೆಗಳ ಸಾಮರ್ಥ್ಯವನ್ನು ಮಿಶ್ರಗೊಳಿಸಿ ಸಮರ್ಥ ತಂಡವನ್ನು ರೂಪಿಸಿದ ತೆರೆಮರೆಯ ಹಿಂದಿನ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಇದ್ದಾರೆ. ತಾವು ನಾಯಕರಾಗಿದ್ದಾಗ ಕೈತಪ್ಪಿದ್ದ ಯಶಸ್ಸನ್ನು ‘ದ್ರೋಣಾಚಾರ್ಯ’ನಾಗಿ ರೋಹಿತ್ ಬಳಗಕ್ಕೆ ಕೊಡಿಸುವ ಛಲ ಅವರದ್ದು. ಆದರೆ ಐದು ಪ್ರಶಸ್ತಿ ಗೆದ್ದ ಅನುಭವ ಇರುವ ಆಸ್ಟ್ರೇಲಿಯಾವನ್ನು ಮಣಿಸುವುದು ಸುಲಭವಲ್ಲ ಎಂಬುದು ಆತಿಥೇಯ ಬಳಗಕ್ಕೆ ಚೆನ್ನಾಗಿ ಗೊತ್ತಿದೆ. ಟೂರ್ನಿಯ ಮೊದಲೆರಡು ಪಂದ್ಯಗಳ ಸೋಲಿನ ನಂತರ ಪುಟಿದೆದ್ದು ಸತತ ಗೆಲುವುಗಳೊಂದಿಗೆ ಈ ಹಂತಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡವು ಆರನೇ ಬಾರಿ ವಿಶ್ವಕಪ್ ಜಯಿಸಲು ಕಠಿಣ ಪೈಪೋಟಿಯೊಡ್ಡುವ ತಂಡವಂತೂ ಹೌದು.
ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಟ್ರಾವಿಸ್ ಹೆಡ್ ಅವರ ಆಟಕ್ಕೆ ಕಡಿವಾಣ ಹಾಕುವ ಸವಾಲು ಶಮಿ ಮತ್ತು ಬೌಲಿಂಗ್ ಪಡೆಯ ಮುಂದಿದೆ. ಜೋಷ್ ಹ್ಯಾಜಲ್‌ವುಡ್, ಪ್ಯಾಟ್ ಕಮಿನ್ಸ್ ಮತ್ತು ಆಡಂ ಜಂಪಾ ಅವರ ದಾಳಿಯನ್ನು ಪುಡಿಗಟ್ಟುವ ಕೆಲಸ ಬ್ಯಾಟಿಂಗ್ ಪಡೆಯಿಂದ ಆದರೆ ಸಬರಮತಿ ನದಿಯಲ್ಲಿ ಸಂಭ್ರಮದ ಉಬ್ಬರವೇಳುವುದರಲ್ಲಿ ಅನುಮಾನವಿಲ್ಲ.
ಹತ್ತು ಪಂದ್ಯಗಳ ಗೆಲುವುಗಳದ್ದು ಒಂದು ತೂಕವಾದರೆ, ಫೈನಲ್ ಆಟವೇ ಬೇರೆ. ಒಂದು ಸಣ್ಣ ಲೋಪ ಫಲಿತಾಂಶದ ದಿಕ್ಕು ಬದಲಿಸಿಬಿಡಬಹುದು. ಆದ್ದರಿಂದ ಹಿಂದಿನ ಸಾಧನೆಯಿಂದ ಅತಿಯಾದ ಅತ್ಮವಿಶ್ವಾಸವಾಗಲಿ, ಮುಂಬರುವ ಸವಾಲಿನ ಒತ್ತಡವಾಗಲೀ ನಮಗಿಲ್ಲ. ವರ್ತಮಾನದ ಬಗ್ಗೆ ಮಾತ್ರ ಗಮನ. ಎದುರಾಗುವ ಸವಾಲುಗಳಿಗೆ ಸಮಚಿತ್ತದೊಂದಿಗೆ ಉತ್ತರ ನೀಡಿ ನಮ್ಮ ಸಾಮರ್ಥ್ಯ ವಿನಿಯೋಗಿಸುತ್ತೇವೆ’ ಎಂದು ನಾಯಕ ರೋಹಿತ್ ಹೇಳಿದ್ದಾರೆ.