ದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆ ಕುರಿತು ಎರಡೂ ದೇಶಗಳ ಪರಸ್ಪರ ಒಪ್ಪಿಗೆ ಬಳಿಕ ಕದನ ವಿರಾಮ ಘೋಷಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪ್ರಧಾನಿ ಮೋದಿ ಸ್ಪಷ್ಟನೆ ನೀಡಿದ್ದಾರೆ.
ಜಿ7 ಶೃಂಗಸಭೆ ಸಂದರ್ಭ ಅಮೆರಿಕ ಅಧ್ಯಕ್ಷ ಟ್ರಂಪ್ ಭಾರತ–ಪಾಕಿಸ್ತಾನ ಕದನ ವಿರಾಮದ ನಿರ್ಣಯದಲ್ಲಿ ತಾವು ಪಾತ್ರವಹಿಸಿದ್ದಾಗಿ ಹೇಳಿಕೆ ಕೊಟ್ಟಿದ್ದರು. ಇದಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಈ ನಿರ್ಧಾರ ಭಾರತ ಹಾಗೂ ಪಾಕಿಸ್ತಾನ ನಡುವಿನ ಪರಸ್ಪರ ಒಪ್ಪಿಗೆಯ ಫಲವಾಗಿದ್ದು, ಯಾವುದೇ ದೇಶದ ಮಧ್ಯಸ್ಥಿಕೆ ಇಲ್ಲ ಎನ್ನುವ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿ ಮೋದಿ ಸುಮಾರು 35 ನಿಮಿಷಗಳ ಕಾಲ ಟ್ರಂಪ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು. ಈ ವೇಳೆ ಮೋದಿಯವರು “ಆಪರೇಷನ್ ಸಿಂಧೂರ” ಬಳಿಕ ಭಾರತವು ಪಾಕಿಸ್ತಾನ ಜೊತೆ ಮಾತುಕತೆ ನಡೆಸಿದ್ದು, ಪರಸ್ಪರ ಹೊಂದಾಣಿಕೆಯಿಂದ ಕದನ ವಿರಾಮಕ್ಕೆ ಒಪ್ಪಿಗೆಯಾಗಿದ್ದು, ಇದರಲ್ಲಿ ಯಾವುದೇ ದೇಶದ ಮಧ್ಯಸ್ಥಿಕೆ ಇರಲಿಲ್ಲ” ಎಂಬ ವಿಷಯವನ್ನು ಹಂಚಿಕೊಂಡಿದ್ದಾರೆ.
ಭಾರತವು ಇನ್ನುಮುಂದೆ ಭಯೋತ್ಪಾದನೆಯನ್ನು ಪ್ರಾಕ್ಸಿ ಯುದ್ಧವಾಗಿ ನೋಡುವುದಿಲ್ಲ, ಬದಲಿಗೆ ಯುದ್ಧವಾಗಿ ನೋಡುತ್ತದೆ. ಭಾರತದ ಆಪರೇಷನ್ ಸಿಂಧೂರ ಇನ್ನೂ ಮುಂದುವರಿಯುತ್ತದೆ ಎಂದು ಮೋದಿ ಹೇಳಿದರು.
ಈ ನಡುವೆ ಟ್ರಂಪ್ ಅವರು ಜಿ7 ಶೃಂಗಸಭೆ ಸಂದರ್ಭ ಮೋದಿ ಅವರನ್ನು ಅಮೆರಿಕ ಪ್ರವಾಸಕ್ಕೆ ಆಹ್ವಾನಿಸಿದರೂ, ಪ್ರಧಾನಿಯವರ ಪೂರ್ವನಿಗದಿತ ಕಾರ್ಯಕ್ರಮಗಳ ಕಾರಣ ಆ ಪ್ರಯಾಣ ಸಾಧ್ಯವಿಲ್ಲ ಎಂದು ಮೋದಿಯವರು ತಿಳಿಸಿದ್ದಾರೆ.
ಇದೇ ವೇಳೆ, ಮೋದಿ ಅವರು ಟ್ರಂಪ್ ಅವರಿಗೆ ಮುಂದಿನ ಕ್ವಾಡ್ ಸಭೆಗೆ ಭಾರತಕ್ಕೆ ಬರುವಂತೆ ಆಹ್ವಾನಿಸಿದ್ದಾರೆ. ಇದಕ್ಕೆ ಟ್ರಂಪ್ ಸಮಮತಿಯನ್ನು ನೀಡಿದ್ದು, ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.