Tuesday, July 7, 2026
Google search engine

Homeದೇಶಕಳೆದ ಕೆಲವು ವರ್ಷಗಳಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳಿಗೆ ಹೊಸ ವೇಗ : ಪ್ರಧಾನಿ ಮೋದಿ

ಕಳೆದ ಕೆಲವು ವರ್ಷಗಳಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳಿಗೆ ಹೊಸ ವೇಗ : ಪ್ರಧಾನಿ ಮೋದಿ

ಜಕಾರ್ತಾ : ಭಾರತ ಮತ್ತು ಇಂಡೋನೇಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧಗಳು ಕಳೆದ ಕೆಲವು ವರ್ಷಗಳಲ್ಲಿ ಹೊಸ ವೇಗ ಮತ್ತು ಆಳವನ್ನು ಪಡೆದುಕೊಂಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಜಕಾರ್ತಾದ ಇಸ್ತಾನಾ ಮರ್ಡೇಕಾದಲ್ಲಿ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಮಾತುಕತೆ ಅತ್ಯಂತ ಫಲಪ್ರದವಾಗಿತ್ತು ಎಂದು ಅವರು ಬಣ್ಣಿಸಿದ್ದಾರೆ.

ಅಧ್ಯಕ್ಷ ಸುಬಿಯಾಂಟೊ ಅವರೊಂದಿಗಿನ ಸಭೆಯ ನಂತರ ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ, “ಜಕಾರ್ತಾದ ಇಸ್ತಾನಾ ಮರ್ಡೇಕಾದಲ್ಲಿ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗೆ ಸಾರ್ಥಕ ಚರ್ಚೆ ನಡೆಯಿತು. ಕಳೆದ ಕೆಲವು ವರ್ಷಗಳಲ್ಲಿ ಭಾರತ-ಇಂಡೋನೇಷ್ಯಾ ಸಂಬಂಧಗಳು ಹೊಸ ವೇಗವನ್ನು ಪಡೆದುಕೊಂಡಿದ್ದು, ಮತ್ತಷ್ಟು ಗಟ್ಟಿಯಾಗಿವೆ” ಎಂದು ಬರೆದುಕೊಂಡಿದ್ದಾರೆ.

ಮಾತುಕತೆಯ ಪ್ರಮುಖ ವಿಷಯಗಳು

ಉಭಯ ನಾಯಕರು ವ್ಯಾಪಾರ, ಮಾನವ ಅಭಿವೃದ್ಧಿ, ಕೃಷಿ, ಆಹಾರ ಭದ್ರತೆ, ಆರೋಗ್ಯ, ರಕ್ಷಣೆ, ಭದ್ರತೆ ಮತ್ತು ಕಡಲ ಸಹಕಾರದಂತಹ ಪ್ರಮುಖ ಕ್ಷೇತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಹಿಂದೂ-ಮಹಾಸಾಗರ ಪ್ರದೇಶದ ಎರಡು ಪ್ರಮುಖ ಕಡಲ ನೆರೆಹೊರೆಯ ರಾಷ್ಟ್ರಗಳಾಗಿರುವುದರಿಂದ, ರಕ್ಷಣೆ ಮತ್ತು ಕಡಲ ಭದ್ರತೆಗೆ ಈ ಸಭೆಯಲ್ಲಿ ವಿಶೇಷ ಒತ್ತು ನೀಡಲಾಯಿತು. ಈ ಸಭೆಯು ಉಭಯ ದೇಶಗಳ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಮತ್ತು ಪ್ರಾದೇಶಿಕ ಹಾಗೂ ಜಾಗತಿಕ ಸಹಕಾರಕ್ಕೆ ಹೊಸ ದಿಕ್ಕನ್ನು ನೀಡಲು ಪ್ರಮುಖ ಪಾತ್ರ ವಹಿಸಲಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಪ್ರಮುಖ ರಕ್ಷಣಾ ಒಪ್ಪಂದಗಳು

ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಧಾನಿ ಮೋದಿ ಉಭಯ ದೇಶಗಳ ನಡುವಿನ ಪ್ರಮುಖ ಒಪ್ಪಂದಗಳನ್ನು ಉಲ್ಲೇಖಿಸಿದರು. ಇದರಲ್ಲಿ ಅತ್ಯಂತ ಪ್ರಮುಖವಾದುದು ಬ್ರಹ್ಮೋಸ್ ಕ್ಷಿಪಣಿ ಒಪ್ಪಂದವಾಗಿದೆ. ಇದರ ಅಡಿಯಲ್ಲಿ ಭಾರತವು ಇಂಡೋನೇಷ್ಯಾಕ್ಕೆ ಹೆಚ್ಚುವರಿ ಬ್ರಹ್ಮೋಸ್ ಕ್ಷಿಪಣಿ ಯುನಿಟ್‌ಗಳನ್ನು ಪೂರೈಸಲಿದೆ. ಇದರೊಂದಿಗೆ ಭಾರತದ ‘ಅಸ್ತ್ರ’ (Astra) ಏರ್-ಟು-ಏರ್ ಕ್ಷಿಪಣಿಯನ್ನು ಖರೀದಿಸಲು ಕೂಡ ಇಂಡೋನೇಷ್ಯಾ ನಿರ್ಧರಿಸಿದೆ.

ಸಾಂಸ್ಕೃತಿಕ ಸಹಕಾರ

ಬುಧವಾರ ಯೋಗ್ಯಕರ್ತಾದಲ್ಲಿರುವ ಪ್ರಂಬನನ್ ದೇವಾಲಯದ ಪುನರ್ನಿರ್ಮಾಣ ಯೋಜನೆಯನ್ನು ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಜಂಟಿಯಾಗಿ ಚಾಲನೆ ಮಾಡಲಿರುವುದಾಗಿ ಪ್ರಧಾನಿ ಘೋಷಿಸಿದರು.

"ಬುಧವಾರ ಅಧ್ಯಕ್ಷ ಪ್ರಬೋವೊ ಅವರೊಂದಿಗೆ ಯೋಗ್ಯಕರ್ತಾದಲ್ಲಿ ಪ್ರಂಬನನ್ ದೇವಾಲಯದ ಪುನರ್ನಿರ್ಮಾಣ ಯೋಜನೆಯನ್ನು ಉದ್ಘಾಟಿಸುವ ಸೌಭಾಗ್ಯ ನನಗ ಸಿಗಲಿದೆ. ಒಂದು ಸಾವಿರ ವರ್ಷಕ್ಕೂ ಹಳೆಯದಾದ ಪ್ರಂಬನನ್ ದೇವಾಲಯವು ಭಾರತ ಮತ್ತು ಇಂಡೋನೇಷ್ಯಾದ ಹಂಚಿಕೊಂಡ ಸಾಂಸ್ಕೃತಿಕ ಪರಂಪರೆಯ ಸಂಕೇತವಾಗಿದೆ," ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

ಮುಂದಿನ ಕಾರ್ಯಕ್ರಮಗಳು

ಮಂಗಳವಾರ ಸಂಜೆ ಪ್ರಧಾನಿ ಮೋದಿ ಜಕಾರ್ತಾದಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬುಧವಾರ ಪ್ರಂಬನನ್ ದೇವಾಲಯಕ್ಕೆ ಭೇಟಿ ನೀಡುವ ಮೂಲಕ ಅವರ ಇಂಡೋನೇಷ್ಯಾ ಪ್ರವಾಸ ಮುಕ್ತಾಯಗೊಳ್ಳಲಿದೆ. 2018 ರಲ್ಲಿ ಪ್ರಾರಂಭವಾದ ಉಭಯ ದೇಶಗಳ ನಡುವಿನ ‘ವ್ಯಾಪಕ ಕಾರ್ಯತಂತ್ರದ ಪಾಲುದಾರಿಕೆ’ಯನ್ನು (Comprehensive Strategic Partnership) ಹೊಸ ಎತ್ತರಕ್ಕೆ ಕೊಂಡೊಯ್ಯುವಲ್ಲಿ ಪ್ರಧಾನಿ ಮೋದಿಯವರ ಈ ಭೇಟಿ ಅತ್ಯಂತ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ಪರಿಗಣಿಸಲಾಗಿದೆ.

RELATED ARTICLES
- Advertisment -
Google search engine

Most Popular