ಶಿವಮೊಗ್ಗ: ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಕೈಗೊಳ್ಳುವ ಎಲ್ಲಾ ಕಾರ್ಯಾಚರಣೆಗಳಿಗೆ ತಮ್ಮ ಸಂಪೂರ್ಣ ಬೆಂಬಲವಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಾಕಿಸ್ತಾನದ ವಿರುದ್ಧ ಪರಿಸ್ಥಿತಿಗೆ ಅನುಗುಣವಾಗಿ ಕೇಂದ್ರ ಕ್ರಮ ಕೈಗೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೇಂದ್ರದ ನಿರ್ಧಾರಕ್ಕೆ ತಮ್ಮ ಪಕ್ಷ ರಾಜಕೀಯವನ್ನು ಬದಿಗಿಟ್ಟು ಈಗಾಗಲೇ ಬೆಂಬಲ ವ್ಯಕ್ತಪಡಿಸಿದೆ ಎಂದು ತಿಳಿಸಿದರು.
ಒಳ ಮೀಸಲಾತಿ ಸಮೀಕ್ಷೆ ಈಗಾಗಲೇ ರಾಜ್ಯಾದ್ಯಂತ ನಡೆಯುತ್ತಿದೆ. ಇದರಿಂದ ನಿಖರವಾದ ಅಂಕಿ ಅಂಶ ತಿಳಿಯಲಿದೆ. ಮುಂದಿನ ದಿನಗಳಲ್ಲಿ ಮೀಸಲಾತಿಯ ಕುರಿತು ನಿರ್ಧಾರ ತೆಗೆದುಕೊಳ್ಳಲು ಅನುಕೂಲ ಆಗಲಿದೆ. ಕೇಂದ್ರ ಸರ್ಕಾರ ಜಾತಿ ಮತ್ತು ಜನಗಣತಿ ನಡೆಸಲು ಮುಂದಾಗಿರುವುದು ಸರಿಯಾಗಿದೆ. ಕಾಂತರಾಜ ವರದಿ ಕುರಿತು ಸಾರ್ವಜನಿಕ ಅಭಿಪ್ರಾಯ ಆಧರಿಸಿ ಬದಲಾವಣೆ ಮಾಡಲು ಸರ್ಕಾರ ಸಿದ್ಧ ಇದೆ ಎಂದರು.