ನವದೆಹಲಿ: ಭಾರತವು ಪ್ಯಾಲೆಸ್ಟೈನ್ ಜನರಿಗಾಗಿ ವೈದ್ಯಕೀಯ ಮತ್ತು ವಿಪತ್ತು ಪರಿಹಾರ ಸಾಮಗ್ರಿಗಳನ್ನು ಒಳಗೊಂಡಿರುವ ಮಾನವೀಯ ನೆರವು ರವಾನಿಸಿದೆ. ಸುಮಾರು ೬.೫ ಟನ್ ವೈದ್ಯಕೀಯ ನೆರವು ಮತ್ತು ೩೨ ಟನ್ ವಿಪತ್ತು ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಯುಪಡೆಯ ವಿಮಾನವು ಈಜಿಪ್ಟ್‌ನತ್ತ ಹಾರಾಟ ಮಾಡಿದೆ. ಈ ಕುರಿತು ವಿದೇಶಾಂಗ ಸಚಿವಾಲಯದ ಅಧಿಕೃತ ವಕ್ತಾರ ಅರಿಂದಮ್ ಬಾಗ್ಚಿ ಇಂದು ಭಾನುವಾರ ಮಾಹಿತಿ ನೀಡಿದ್ದಾರೆ.
ಭಾರತದ ಕಲ್ಪಿಸಿರುವ ವೈದ್ಯಕೀಯ ನೆರವಿನಲ್ಲಿ ಅಗತ್ಯ ಜೀವರಕ್ಷಕ ಔಷಧಗಳು, ತುರ್ತು ವೈದ್ಯಕೀಯ ಪರಿಸ್ಥಿತಿಗಳನ್ನು ನಿಭಾಯಿಸುವ ರಕ್ಷಣಾತ್ಮಕ ಮತ್ತು ಶಸ್ತ್ರಚಿಕಿತ್ಸಾ ವಸ್ತುಗಳನ್ನು ಒಳಗೊಂಡಿವೆ. ಗಾಯಾಳುಗಳ ಆರೈಕೆಗೆ ಸಂಬಂಧಿಸಿದ ಸಾಮಗ್ರಿಗಳು ಸಹ ಇದೆ. ಜೊತೆಗೆ ವಿಪತ್ತು ಪರಿಹಾರ ಸಾಮಗ್ರಿಗಳಾದ ಟೆಂಟ್‌ಗಳು, ಬ್ಯಾಗ್‌ಗಳು, ಟಾರ್ಪಾಲಿನ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು, ಮೂಲಭೂತ ನೈರ್ಮಲ್ಯ ವಸ್ತುಗಳ ನೆರವನ್ನು ಭಾರತ ಕಲ್ಪಿಸಿದೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ನಡುವೆ ಭಾರತವು ಪ್ಯಾಲೆಸ್ಟೈನ್‌ಗೆ ಮಾನವೀಯ ನೆರವು ರವಾನಿಸಿದೆ. ಅಕ್ಟೋಬರ್ ೭ರಂದು ಹಮಾಸ್ ನ ದಾಳಿ’ ನಡೆಸಿದ ನಂತರ ಇಸ್ರೇಲ್ ಪ್ರತಿದಾಳಿ ಆರಂಭಿಸಿದೆ. ಇದರ ನಡುವೆ ಶನಿವಾರ ಮಾನವೀಯ ನೆರವನ್ನು ಹೊತ್ತ ೨೦ ಟ್ರಕ್‌ಗಳಿಗೆ ಈಜಿಪ್ಟ್‌ನ ರಫಾ ಗಡಿಯ ಮೂಲಕ ಗಾಜಾ ಪಟ್ಟಿಯನ್ನು ಪ್ರವೇಶಿಸಲು ಅನುಮತಿಸಲಾಗಿದೆ.
ಮತ್ತೊಂದೆಡೆ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, ಎರಡು ಮಿಲಿಯನ್‌ಗಿಂತಲೂ ಹೆಚ್ಚು ಜನರನ್ನು ಹೊಂದಿರುವ ಎನ್‌ಕ್ಲೇವ್‌ನಲ್ಲಿ ನೆರವಿನ ತುಂಬಾ ಅಗತ್ಯವಾಗಿದೆ ಎಂದು ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ವೈದ್ಯಕೀಯ ನರೆವು ರಾಫಾ ಗಡಿಯನ್ನು ದಾಟಿದೆ. ಗಾಜಾದಲ್ಲಿರುವ ಎಲ್ಲ ಜನರ ತುರ್ತು ಆರೋಗ್ಯ ಅಗತ್ಯಗಳನ್ನು ಪೂರೈಸಲು, ಎಲ್ಲ ಮಾನವೀಯ ಕಾರ್ಯಕರ್ತರ ರಕ್ಷಣೆ, ಆರೋಗ್ಯ ಸಹಾಯಕ್ಕಾಗಿ ನಿರಂತರ ಪ್ರವೇಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.