ಸ್ವೀಡನ್ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಸ್ವೀಡನ್ ಪ್ರಧಾನಿ ಉಲ್ಫ್ ಕ್ರಿಸ್ಟರ್ಸನ್ ಅವರು ಇತ್ತೀಚೆಗೆ ನೋಬೆಲ್ ಪ್ರಶಸ್ತಿ ವಿಜೇತ ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಪರಂಪರೆಯನ್ನು ಸ್ಮರಿಸುವ ವಿಶೇಷ ಸಾಂಸ್ಕೃತಿಕ ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು.
ಸ್ವೀಡನ್ ಪ್ರಧಾನಿ ಕ್ರಿಸ್ಟರ್ಸನ್ ಅವರು ಪ್ರಧಾನಿ ಮೋದಿಯವರಿಗೆ ಅತ್ಯಂತ ಅಪರೂಪದ ಸ್ಮರಣಿಕೆಗಳನ್ನು ನೀಡಿದರು.
ಹಸ್ತಲಿಖಿತ ಸೂಕ್ತಿಗಳು : ರವೀಂದ್ರನಾಥ ಟ್ಯಾಗೋರ್ ಅವರು ಸ್ವತಃ ಕೈಬರಹದಲ್ಲಿ ಬರೆದಿದ್ದ ಎರಡು ನೀತಿ ವಚನಗಳ (Epigrams) ಪ್ರತಿಗಳು.
ಐತಿಹಾಸಿಕ ಭಾವಚಿತ್ರ : 1921ರಲ್ಲಿ ಟ್ಯಾಗೋರ್ ಅವರು ಸ್ವೀಡನ್‌ನ ಉಪ್ಸಾಲಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ಸಂದರ್ಭದ ಅಪರೂಪದ ಫೋಟೋ.
ಈ ದಾಖಲೆಗಳು ಇತ್ತೀಚೆಗೆ ಸ್ವೀಡನ್‌ನ ರಾಷ್ಟ್ರೀಯ ದಾಖಲೆಗಳಲ್ಲಿ ಪತ್ತೆಯಾಗಿದ್ದು, ಇವುಗಳನ್ನು ಟ್ಯಾಗೋರ್ ಅವರು 1921 ಮತ್ತು 1926 ರ ತಮ್ಮ ಸ್ವೀಡನ್ ಪ್ರವಾಸದ ಸಂದರ್ಭದಲ್ಲಿ ಸಿದ್ಧಪಡಿಸಿದ್ದರು.
ಪ್ರಧಾನಿ ಮೋದಿ ನೀಡಿದ ಪ್ರತಿ-ಉಡುಗೊರೆ
ಪ್ರಧಾನಿ ಮೋದಿ ಅವರು ಭಾರತದ ಪರವಾಗಿ ಟ್ಯಾಗೋರ್ ಕೃತಿಗಳ ಸಂಕಲನ: ಗುರುದೇವ ರವೀಂದ್ರನಾಥ ಟ್ಯಾಗೋರ್ ಅವರ ಆಯ್ದ ಕೃತಿಗಳ ಸಂಗ್ರಹ. ಶಾಂತಿನಿಕೇತನದ ಹ್ಯಾಂಡ್‌ಬ್ಯಾಗ್: ಸ್ಥಳೀಯ ಕುಶಲಕರ್ಮಿಗಳನ್ನು ಸಬಲೀಕರಣಗೊಳಿಸಲು ಟ್ಯಾಗೋರ್ ಅವರು ಸ್ವತಃ ವಿನ್ಯಾಸಗೊಳಿಸಿದ ವಿಶಿಷ್ಟ ಕಲಾಕೃತಿಯನ್ನು ಒಳಗೊಂಡ ಕೈಚೀಲವನ್ನು ನೀಡಿದರು.
“ಕಲೆಯು ಕೇವಲ ಗ್ಯಾಲರಿಗಳಿಗೆ ಸೀಮಿತವಾಗದೆ, ದೈನಂದಿನ ಬಳಕೆಯ ವಸ್ತುಗಳಲ್ಲಿ ಬೆರೆಯಬೇಕು” ಎಂಬ ಟ್ಯಾಗೋರ್ ಅವರ ದರ್ಶನವನ್ನು ಈ ಬ್ಯಾಗ್ ಪ್ರತಿಬಿಂಬಿಸುತ್ತದೆ.
ಐತಿಹಾಸಿಕ ಹಿನ್ನೆಲೆ
ರವೀಂದ್ರನಾಥ ಟ್ಯಾಗೋರ್ ಅವರು 1913 ರಲ್ಲಿ ನೋಬೆಲ್ ಪ್ರಶಸ್ತಿ ಸ್ವೀಕರಿಸಲು ಸ್ವೀಡನ್‌ಗೆ ಹೋಗಲು ಸಾಧ್ಯವಾಗಿರಲಿಲ್ಲ. ಆದರೆ, 1921 ರಲ್ಲಿ ಅವರು ಸ್ವೀಡನ್‌ಗೆ ಭೇಟಿ ನೀಡಿದಾಗ ಅಲ್ಲಿನ ರಾಜ ಗುಸ್ತಾವ್-V ಅವರನ್ನು ಆತ್ಮೀಯವಾಗಿ ಸ್ವಾಗತಿಸಿದ್ದರು.
ಈ ಉಡುಗೊರೆಗಳ ವಿನಿಮಯವು ಟ್ಯಾಗೋರ್ ಅವರು 1926 ರಲ್ಲಿ ನಡೆಸಿದ ಐತಿಹಾಸಿಕ ಸ್ವೀಡನ್ ಭೇಟಿಯ ಶತಮಾನೋತ್ಸವದ ನೆನಪಿನಲ್ಲಿ ನಡೆದಿದೆ.
ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಪ್ರಧಾನಿ ಮೋದಿ, “ಗುರುದೇವ ಟ್ಯಾಗೋರ್ ಅವರ ಹಸ್ತಪ್ರತಿಗಳನ್ನು ಪಡೆದು ನಾನು ಭಾವಪರವಶನಾಗಿದ್ದೇನೆ. ಈ ಉಡುಗೊರೆ ಉಭಯ ದೇಶಗಳ ನಡುವಿನ ಗಾಢ ಸಾಂಸ್ಕೃತಿಕ ಸಂಬಂಧದ ಸಂಕೇತವಾಗಿದೆ. ಮಾನವ ಘನತೆ, ಜ್ಞಾನ ಮತ್ತು ಭ್ರಾತೃತ್ವದ ಕುರಿತಾದ ಟ್ಯಾಗೋರ್ ಅವರ ದರ್ಶನವು ಸಾರ್ವಕಾಲಿಕವಾದುದು,” ಎಂದು ಸ್ವೀಡನ್ ಸರ್ಕಾರಕ್ಕೆ ಧನ್ಯವಾದ ಅರ್ಪಿಸಿದ್ದಾರೆ.



