ದುಬೈ: ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಮತ್ತೆ ಅಗ್ರಸ್ಥಾನಕ್ಕೇರಿದೆ.
ವೆಲ್ಲಿಂಗ್ಟನ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್ 172 ರನ್‌ಗಳ ಸೋಲಿಗೆ ಶರಣಾಗಿದೆ. ಇದರೊಂದಿಗೆ ರ‍್ಯಾಂಕಿಂಗ್ ಪಟ್ಟಿಯಲ್ಲಿ ನ್ಯೂಜಿಲೆಂಡ್ ಎರಡನೇ ಸ್ಥಾನಕ್ಕೆ ಕುಸಿದಿದೆ.
ಅಗ್ರಸ್ಥಾನ ಪಡೆದಿರುವ ರೋಹಿತ್ ಶರ್ಮಾ ಬಳಗದ ಶೇಕಡವಾರು ಪಾಯಿಂಟ್ಸ್ 64.58 ಆಗಿದೆ. ನ್ಯೂಜಿಲೆಂಡ್‌ನ ಶೇಕಡವಾರು ಪಾಯಿಂಟ್ಸ್ 60ಕ್ಕೆ ಇಳಿದಿದೆ.
ನ್ಯೂಜಿಲೆಂಡ್ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಗೆಲುವು ದಾಖಲಿಸಿರುವ ಆಸ್ಟ್ರೇಲಿಯಾ, 59.09 ಶೇಕಡವಾರು ಪಾಯಿಂಟ್ಸ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ಸಾಗುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ, ಇನ್ನೂ ಒಂದು ಬಾಕಿ ಉಳಿದಿರುವಂತೆಯೇ ಭಾರತ ತಂಡವು 3-1ರ ಅಂತರದಿಂದ ವಶಪಡಿಸಿಕೊಂಡಿದೆ. ಸರಣಿಯ ಕೊನೆಯ ಪಂದ್ಯ ಧರ್ಮಶಾಲಾದಲ್ಲಿ ನಡೆಯಲಿದೆ.
ಒಂದು ವೇಳೆ ಧರ್ಮಶಾಲಾ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು ಎದುರಾದರೆ ಆಸ್ಟ್ರೇಲಿಯಾ ತಂಡವು ಅಗ್ರಸ್ಥಾನ ಪಡೆಯಲಿದೆ.
ಲಯನ್ ಮೋಡಿ, ಆಸೀಸ್‌ಗೆ ಗೆಲುವು…
ನೇಥನ್ ಲಯನ್ (65ಕ್ಕೆ 6 ವಿಕೆಟ್) ಕೈಚಳಕದ ನೆರವಿನಿಂದ ಆಸ್ಟ್ರೇಲಿಯಾ ತಂಡವು, ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ 172 ರನ್ ಅಂತರದ ಗೆಲುವು ದಾಖಲಿಸಿದೆ. ನ್ಯೂಜಿಲೆಂಡ್ ಪರ ರಚಿನ್ ರವೀಂದ್ರ ಗರಿಷ್ಠ 59 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್ ಪಟ್ಟಿ:
ಆಸ್ಟ್ರೇಲಿಯಾ ಮೊದಲ ಇನಿಂಗ್ಸ್: 383ಕ್ಕೆ ಆಲೌಟ್ (ಕ್ಯಾಮರೂನ್ ಗ್ರೀನ್ 174, ಮ್ಯಾಟ್ ಹೆನ್ಲಿ 70/5) ನ್ಯೂಜಿಲೆಂಡ್ ಮೊದಲ ಇನಿಂಗ್ಸ್: 179ಕ್ಕೆ ಆಲೌಟ್ (ಗ್ಲೆನ್ ಫಿಲಿಪ್ಸ್ 71, ನೇಥನ್ ಲಯನ್ 43/4) ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್: 164ಕ್ಕೆ ಆಲೌಟ್ (ನೇಥನ್ ಲಯನ್ 41, ಗ್ಲೆನ್ ಫಿಲಿಪ್ಸ್ 45/5) ನ್ಯೂಜಿಲೆಂಡ್ ದ್ವಿತೀಯ ಇನಿಂಗ್ಸ್: 196ಕ್ಕೆ ಆಲೌಟ್ (ರಚಿನ್ ರವೀಂದ್ರ 59, ನೇಥನ್ ಲಯನ್ 65/6)
ಫಲಿತಾಂಶ: ಆಸ್ಟ್ರೇಲಿಯಾಕ್ಕೆ 172 ರನ್ ಅಂತರದ ಗೆಲುವು