ಮೈಸೂರು: ಸ್ವಾತಂತ್ರ್ಯ ನಂತರದ ೭೫ ವರ್ಷದಲ್ಲಿ ದೇಶ ಆಹಾರ, ತಂತ್ರಜ್ಞಾನ, ಬಾಹ್ಯಾಕಾಶ, ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲ ವಲಯದಲ್ಲೂ ಅಭಿವೃದ್ಧಿ ಕಂಡಿದೆ. ವಿಶ್ವದ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವ ಕಡೆ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಸಿಇಒ ಡಾ.ಅಶೋಕ ದಳವಾಯಿ ತಿಳಿಸಿದರು.
ನಗರದ ಕೇಂದ್ರೀಯ ಆಹಾರ ತಂತ್ರಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಸೋಮವಾರ ಆಯೋಜಿಸಿದ್ದ ಒಂದು ವಾರ, ಒಂದು ಪ್ರಯೋಗಾಲಯ ಆಹಾರ ಸಂಶೋಧನೆಯ ಸಂಭ್ರಮೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಂಖ್ಯೆಯೇ ದೇಶದ ಸಂಪನ್ಮೂಲವಾಗಿದ್ದು, ಉದ್ಯೋಗ ಸೃಷ್ಟಿಯಲ್ಲಿ ದೇಶ ಹಿಂದೆ ಬಿದ್ದಿಲ್ಲ. ಸೇವಾ ವಲಯದಲ್ಲಿ ವಿಪುಲ ಅವಕಾಶಗಳಿವೆ ಎಂದು ಪ್ರತಿಪಾದಿಸಿದರು. ಸಿಎಫ್‌ಟಿಆರ್‌ಐ ವರ್ಷಕ್ಕೆ ೧೦೦ಕ್ಕೂ ಹೆಚ್ಚು ಆವಿಷ್ಕಾರಗಳನ್ನು ನೀಡುವ ಮೂಲಕ ಜನರ ಜೀವನವನ್ನು ಸುಧಾರಿಸಿದೆ. ದೇಶವು ಆಹಾರದಲ್ಲಿ ಸ್ವಾವಲಂಬನೆ ಸಾಧಿಸಲು ಸಂಸ್ಥೆಯ ಕೊಡುಗೆ ಅನನ್ಯ. ದೇಶದಲ್ಲಿ ಮಿತವಾದ ನೈಸರ್ಗಿಕ ಸಂಪನ್ಮೂಲವಿದ್ದರೂ ಜನ ಸಂಪನ್ಮೂಲವನ್ನು ಅವಲಂಬಿಸಿದೆ. ಸಂಪನ್ಮೂಲಗಳ ಸಮರ್ಪಕ ಬಳಕೆಯಲ್ಲೂ ಮುಂದಿದೆ ಎಂದರು. ಪಾಶ್ಚಾತ್ಯ ದೇಶಗಳಲ್ಲಿ ವಸ್ತುಗಳನ್ನು ಬಳಸಿ ಬಿಸಾಡಲಾಗುತ್ತಿದೆ. ಆದ್ದರಿಂದಲೇ, ಜಾಗತಿಕ ತಾಪಮಾನ ಏರಿಕೆ, ಹವಾಮಾನ ಬದಲಾವಣೆಯು ಮುಂದಿರುವ ಸವಾಲಾಗಿದೆ. ಸಂಪನ್ಮೂಲಗಳ ಮರುಬಳಕೆಯ ಕಡೆ ದೇಶದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಗಳು ಹೆಚ್ಚು ಆಲೋಚಿಸಬೇಕು. ಪೆಟ್ರೋಲ್ ಉತ್ಪನ್ನಗಳ ಬದಲು ಜೈವಿಕ ಅನಿಲ, ಸೌರಶಕ್ತಿ ಬಳಕೆಯನ್ನು ಪ್ರೋತ್ಸಾಹಿಸಬೇಕು. ಶಕ್ತಿ ಉತ್ಪಾದನೆಗೆ ವ್ಯಯಿಸುವ ಹಣ ತಗ್ಗಬೇಕು. ದೀರ್ಘಕಾಲದ ಬಳಕೆಗೆ ದಾರಿ ಮಾಡಿಕೊಡುವ ನವೀಕೃತ ಇಂಧನಗಳ ಬಳಕೆಯಾಗಬೇಕು ಎಂದು ತಿಳಿಸಿದರು.
ನಮಗೆ ಹೊಸ ವಿಜ್ಞಾನ, ಹೊಸ ತಂತ್ರ ಜ್ಞಾನಕ್ಕಿಂತ ದಿನೇ ದಿನೇ ಹೊಸದಾದ ಆವಿಷ್ಕಾರಗಳು ಆಗಬೇಕಿದೆ. ನಮ್ಮಲ್ಲಿ ಹಲವು ಉತ್ಪನ್ನಗಳ ಉತ್ಪಾದನೆ ಆಗುತ್ತಿದೆ. ಆದರೆ, ವಾತಾವರಣಕ್ಕೆ ತಕ್ಕಂತೆ ಉತ್ಪನ್ನಗಳ ಉತ್ಪಾದನೆ ಆಗಬೇಕಿದೆ. ಹೀಗಾಗಿ, ವಿಜ್ಞಾನಿಗಳು ತತ್ವಜ್ಞಾನಿ ಆಗಿ ಯೋಚಿಸಬೇಕಿದೆ. ಆಗ ಸರಿಯಾದ ಉತ್ಪನ್ನಗಳು ಸರಿಯಾದ ಸಮಯಕ್ಕೆ ಉತ್ಪಾದನೆ ಆಗುತ್ತದೆ ಎಂದು ಹೇಳಿದರು.
ಮೈಸೂರು ಮಾದರಿ: ೨೦ನೇ ಶತಮಾನದ ಆರಂಭದಲ್ಲಿಯೇ ಮೈಸೂರು ಅರಸರು ಉದ್ಯೋಗ ಸೃಷ್ಟಿಗೆ ನೂರಾರು ಉದ್ಯಮಗಳನ್ನು ಆರಂಭಿಸಿದರು. ಕೃಷಿ, ನೀರಾವರಿ, ರೇಷ್ಮೆ, ಜವಳಿ, ಕಬ್ಬಿಣ ಮತ್ತು ಉಕ್ಕು ಸೇರಿದಂತೆ ಎಲ್ಲ ಯೋಜನೆಗಳಿಂದ ಮೈಸೂರು ದೇಶಕ್ಕೆ ಮಾದರಿಯಾಯಿತು. ಸ್ವಾತಂತ್ರ್ಯ ನಂತರ ದೇಶವೇ ಮೈಸೂರನ್ನು ಅನುಸರಿಸಿತು ಎಂದು ಅಶೋಕ್ ದಳವಾಯಿ ಬಣ್ಣಿಸಿದರು.
ಸಂಸ್ಥೆಯ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ವಿಜ್ಞಾನಿಗಳಾದ ಡಾ.ವಿ.ಪ್ರಕಾಶ್, ಡಾ.ಎಸ್.ಆರ್.ಭೌಮಿಕ್, ಡಾ.ಬಿ.ವಿ.ಸತ್ಯೇಂದ್ರರಾವ್ ಇದ್ದರು.
ಸಂಸ್ಥೆಯ ೪ ಉತ್ಪನ್ನಗಳನ್ನು ಬಿಡುಗಡೆ ಮಾಡಲಾಯಿತು. ಬೊಜ್ಜು ಹೆಚ್ಚಿಸದ ಸೀಸ್ಲಿಂ, ಹೂವಿನ ತಾಜಾತನ ಕಾಪಾಡುವ ಹೂ ಕಾಗದ, ಬೇಕರಿ ಉತ್ಪನ್ನಗಳಲ್ಲಿ ಬಳಸಲಾಗುವ ಗೋಧಿ ಹೊಟ್ಟಿನಿಂದ ತಯಾರಿಸಿದ ಅರಬಿನೊಕ್ಸೈಲಾನ್, ಹಾಗೂ ಬೇಕರ್ ಈಸ್ಟ್ ಅನ್ನು ಗಣ್ಯರು ಬಿಡುಗಡೆ ಮಾಡಿದರು.