ನಾಗ್ಪುರ : ಜನನ ಪ್ರಮಾಣ 2.1 ಕ್ಕಿಂತ ಕಡಿಮೆಯಾದರೆ ಸಮಾಜದ ಅಳಿವು ಸಂಭವಿಸಬಹುದು. ಹಾಗಾಗಿ ಪ್ರತಿಯೊಬ್ಬ ದಂಪತಿಗಳು ಮೂರು ಮಕ್ಕಳನ್ನು ಹೆರಬೇಕು ಎಂದು RSS ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ನೀಡಿದ್ದು ಇದೀಗ ಭಾರಿ ವೈರಲ್ ಆಗಿದೆ.
ನಾಗ್ಪುರದಲ್ಲಿ ನಡೆದ ‘ಕಥಲೆ ಕುಲ್ (ಕುಲ) ಸಮ್ಮೇಳನ’ದಲ್ಲಿ ಮಾತನಾಡಿದ ಭಾಗವತ್, ಕೌಟುಂಬಿಕ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. ಜನಸಂಖ್ಯಾ ವಿಜ್ಞಾನದ ಪ್ರಕಾರ, ಭಾರತೀಯ ಸಮಾಜ, ಟಿಪಿಆರ್ (ಮಹಿಳೆ ತನ್ನ ಜೀವಿತಾವಧಿಯಲ್ಲಿ ಜನ್ಮ ನೀಡುವ ಮಕ್ಕಳ ಸರಾಸರಿ ಸಂಖ್ಯೆ) ಅಳಿವನ್ನು ಎದುರಿಸಬಹುದು ಎಂದು ಅವರು ಎಚ್ಚರಿಕೆ ನೀಡಿದರು.
ಜನಸಂಖ್ಯೆ ಕುಸಿಯುತ್ತಿರುವುದು ಕಳವಳಕಾರಿಯಾಗಿದೆ. ಒಂದು ಸಮಾಜದ ಒಟ್ಟು ಫಲವತ್ತತೆ ದರವು 2.1 ಇರವುದು ಅಪಾಯಕಾರಿ ಎಂದು ಅವರು ಹೇಳಿದರು.
ಫಲವತ್ತತೆಯ ಸಮಸ್ಯೆಯಿಂದ ಈಗಾಗಲೇ ಅನೇಕ ಭಾಷೆಗಳು ಮತ್ತು ಸಂಸ್ಕೃತಿಗಳು ಕಣ್ಮರೆಯಾಗಿವೆ. ಹೀಗಾಗಿ, ಫಲವತ್ತತೆ ದರವನ್ನು 2.1 ಕ್ಕಿಂತ ಹೆಚ್ಚು ಕಾಪಾಡಿಕೊಳ್ಳುವುದು ಅತ್ಯಗತ್ಯ” ಎಂದು ಭಾಗವತ್ ಹೇಳಿದರು. ಕುಟುಂಬ ಸಮಾಜದ ಅವಿಭಾಜ್ಯ ಅಂಗವಾಗಿದೆ. ಪ್ರತಿ ಕುಟುಂಬವು ಪ್ರಮುಖ ಸಮಾಜ ನಿರ್ಮಾಣ ವ್ಯವಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ,ʼʼ ಎಂದು ಒತ್ತಿ ಹೇಳಿದರು.
1998 ಅಥವಾ 2002ರಲ್ಲಿ ರೂಪಿಸಲಾದ ನಮ್ಮ ದೇಶದ ಜನಸಂಖ್ಯಾ ನೀತಿಯು ಒಟ್ಟು ಫಲವತ್ತತೆ ದರವು 2.1 ಕ್ಕಿಂತ ಕಡಿಮೆ ಇರಬಾರದು ಎಂದು ಸ್ಪಷ್ಟವಾಗಿ ಹೇಳುತ್ತದೆ. ಆದ್ದರಿಂದ ನಾವು 2.1 ಎಂದರೆ ಕನಿಷ್ಠ ಮೂರು ಆಗಿರಬೇಕು ಎಂದು ಅಂದಾಜಿಸಬೇಕು” ಎಂದು ಭಾಗವತ್ ಹೇಳಿದರು.
2021ರಲ್ಲಿ ಬಿಡುಗಡೆಯಾದ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶಗಳ ಪ್ರಕಾರ, ಭಾರತದ ಟಿಎಫ್ಆರ್ 2.2 ರಿಂದ 2 ಕ್ಕೆ ಇಳಿದಿದೆ. ಗರ್ಭನಿರೋಧಕ ಬಳಕೆಯ ಪ್ರಮಾಣವು ಶೇಕಡಾ 54 ರಿಂದ 67 ಕ್ಕೆ ಏರಿದೆ.
ಒಟ್ಟು ಫಲವತ್ತತೆ ದರ 2.1 ಅನ್ನು ಪರ್ಯಾಯ ದರವೆಂದು ಪರಿಗಣಿಸಲಾಗುತ್ತದೆ. ಇದು ಜನಸಂಖ್ಯೆಯ ಬೆಳವಣಿಗೆಯಲ್ಲಿ ನಿರ್ಣಾಯಕ ಅಂಶ. ಮಹಿಳೆ ಮತ್ತು ಪುರಷನ ನಿಧನದ ನಂತರ ಉಳಿದಿರುವರ ಸಂಖ್ಯೆಯನ್ನು ಖಚಿತಪಡಿಸುತ್ತದೆ ಎಂದು ಹೇಳಿದರು.
ಭಾಗವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಒವೈಸಿ, “ಮುಸ್ಲಿಂ ಮಹಿಳೆಯರು ಹೆಚ್ಚು ಮಕ್ಕಳನ್ನು ಹೆರುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆ ಹೇಳಿದ್ದರು” ಎಂದು ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ. ಹಿಂದೂ ಹೆಣ್ಣುಮಕ್ಕಳಿಂದ ಮಂಗಳಸೂತ್ರಗಳು ಸೇರಿದಂತೆ ಚಿನ್ನವನ್ನು ಮುಸ್ಲಿಮರಿಗೆ ಹಂಚಿಕೆ ಮಾಡುತ್ತಾರೆ ಮೋದಿಯವರ ಹೇಳಿಕೆಯನ್ನು ಅವರು ಉಲ್ಲೇಖಿಸಿದರು. ಹೆಚ್ಚು ಮಕ್ಕಳನ್ನು ಹೆರಬೇಕೆಂದು ಭಾಗವತ್ ಹೇಳುತ್ತಾರೆ. ಹೀಗಾಗಿ ಆರ್ಎಸ್ಎಸ್ನಲ್ಲಿರುವವರು ಮದುವೆಯಾಗಲು ಪ್ರಾರಂಭಿಸಬೇಕು” ಎಂದು ಓವೈಸಿ ಪ್ರತಿಕ್ರಿಯಿಸಿದ್ದಾರೆ .