ಮೈಸೂರು: ಮಾಜಿ ಪ್ರಧಾನಿ ಇಂದಿರಾಗಾಂಧಿಯವರುವಿಶ್ವದಲ್ಲಿ ಇಂಡಿಯಾವನ್ನು ಗುರುತಿಸುವಂತೆ ಆಡಳಿತ ನಡೆಸಿದವರು ಎಂದು ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ತಿಳಿಸಿದರು.
ಹೊಯ್ಸಳ ಟ್ರಸ್ಟ್ ವತಿಯಿಂದ ಗನ್ ಹೌಸ್ ವೃತ್ತದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಉಚಿತ ಹೋಳಿಗೆ ಊಟ ವಿತರಿಸಿ ಮಾತನಾಡಿದ ಅವರು ೧೯೬೫ರ ಭಾರತ-ಪಾಕಿಸ್ತಾನಯುದ್ಧ ನಡೆಯುತ್ತಿದ್ದಾಗ, ಇಂದಿರಾ ಶ್ರೀನಗರದ ಗಡಿ ಪ್ರದೇಶದಲ್ಲಿ ವಿಹಾರ ನಡೆಸಿದ್ದರು.
ಪಾಕಿಸ್ತಾನಿ ದಂಗೆಕೋರರು ನಗರದ ಹತ್ತಿರಕ್ಕೆ ನುಸುಳಿ ಬಂದಿದ್ದಾರೆ ಎಂದು ಸೇನೆಯು ಎಚ್ಚರಿಕೆ ನೀಡಿದರೂ ಅದನ್ನು ಲೆಕ್ಕಿಸದ ಅವರು, ಜಮ್ಮು ಅಥವಾ ದೆಹಲಿಗೆ ವಾಸ್ತವ್ಯ ಸ್ಥಳಾಂತರಿಸಲು ನಿರಾಕರಿಸಿ ಪಾಕಿಸ್ತಾನದ ದಾಳಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿದ ದಿಟ್ಟ ಮಹಿಳೆ ಎಂದರು. ಇಂದಿರಾ ಬಡವರ ಪರ ಇದ್ದರೂ ಎಂಬುದಕ್ಕೆ ಅವರು ರೂಪಿಸಿದ ಅನೇಕ ಕಾಠ್ಯಕ್ರಮಗಳೇ ಸಾಕ್ಷಿ ಎಂದು ತಿಳಿಸಿದರು.
ಈ ದೇಶದ ಪ್ರತಿಯೊಬ್ಬರಿಗೂ ಅನ್ನ ಆಶ್ರಯ ಬಟ್ಟೆ ದೊರೆಯಲಿ ಎಂದು ಕಾರ್ಯಕ್ರಮಗಳನ್ನು ರೂಪಿಸಿದ್ದರಿಂದ ಇಂದಿಗೂ ಆ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ, ಇಂದಿರಾಗಾಂಧಿ ಆಡಳಿತ ಸುವರ್ಣ ಯುಗ ಎಂದು ಬಣ್ಣಿಸಿದರು.
ಇದೇ ಸಂದರ್ಭದಲ್ಲಿ ಕರಿಗೌಡ, ನಾಗರಾಜು, ವರುಣ ಮಹದೇವ್, ಜೆಟ್ಟಿ ಹುಂಡಿ ಗೋಪಾಲ್ ,ಲೋಕೇಶ್, ರವಿಚಂದ್ರ, ಎಸ್ ಎನ್ ರಾಜೇಶ್, ರಾಕೇಶ್, ದುರ್ಗಾ ಪ್ರಸಾದ್, ಹಾಗೂ ಇನ್ನಿತರರು ಹಾಜರಿದ್ದರು.
