ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಮುಸುಕಿನ ಜೋಳ ಬೆಳೆಗೆ ಸೈನಿಕ ಹುಳು ಕಾಟ ಎದುರಾದ ವೇಳೆ ರೈತರು ಮುಂಜಾಗ್ರತ ಕ್ರಮವಾಗಿ ಕೃಷಿ ಇಲಾಖೆ ಮಾರ್ಗದರ್ಶನದ ಅನುಸಾರ ಔಷಧಿ ಸಿಂಪಡಿಸುವಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೈ.ಪ್ರಸಾದ್ ತಿಳಿಸಿದರು.
ಪಿರಿಯಾಪಟ್ಟಣ ತಾಲೂಕಿನ ವಿವಿದೆಡೆ ರೈತರು ಜಮೀನಿನಲ್ಲಿ ಬೆಳೆದ ಮುಸುಕಿನ ಜೋಳಕ್ಕೆ ಸೈನಿಕ ಹುಳು ಬಾದೆ ಹೆಚ್ಚಾದ ಹಿನ್ನೆಲೆ ಭೇಟಿ ನೀಡಿ ಹತೋಟಿ ಕ್ರಮಗಳ ಬಗ್ಗೆ ರೈತರಿಗೆ ಮಾಹಿತಿ ನೀಡಿ ನವಿಲೂರು ಗ್ರಾಮದಲ್ಲಿ ಅವರು ಮಾತನಾಡಿದರು, ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಮುಸುಕಿನ ಜೋಳವು ಪ್ರಮುಖ ಬೆಳೆಯಾಗಿದ್ದು ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮುಸುಕಿನ ಜೋಳ ಬಿತ್ತನೆ ಮಾಡಲಾಗಿದೆ ಈಗಾಗಲೇ ಬಿತ್ತನೆಯಿಂದ ಹಿಡಿದು 20-25 ದಿನದ ಬೆಳೆವರೆಗೂ ಅಲ್ಲಲ್ಲಿ ಸೈನಿಕ ಹುಳುವಿನ ಬಾಧೆ ಕಂಡು ಬಂದಿದೆ ಈ ನಿಟ್ಟಿನಲ್ಲಿ ರೈತರಿಗಾಗಿ ಸೈನಿಕ ಹುಳು ಬಾದೆ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮ ಬಗ್ಗೆ ಅಗತ್ಯ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಫಾಲ್ ಸೈನಿಕ ಹುಳು ಹಸಿರು ಬಣ್ಣದಲ್ಲಿದ್ದು ತಲೆಯ ಮೇಲ್ಭಾಗದಲ್ಲಿ ತಲೆಕೆಳಗಾದ ಙ ಚಿಹ್ನೆಯನ್ನು ಹೊಂದಿರುತ್ತದೆ, ಇದರ ಉದರದ 8 ಮತ್ತು 9ನೇ ಭಾಗದಲ್ಲಿ ನಾಲ್ಕು ಉಬ್ಬಿದ ಕಪ್ಪು ಚುಕ್ಕೆಗಳು ಚಚ್ಚೌಕಕಾರದ ರೀತಿಯಲ್ಲಿ ಕಂಡುಬರುತ್ತದೆ, ಒಂದುವರೆ ಇಂಚು ಉದ್ದದ ಹುಳುವು ಪತಂಗಗಳಾಗಿ ಸಾವಿರಾರು ಸಂಖ್ಯೆಗಳಲ್ಲಿ ಆಹಾರವನ್ನು ಹುಡುಕಿಕೊಂಡು ಬಹಳ ದೂರ ಸಾಗಿ ಆಹಾರ ಬೆಳೆಯಿರುವ ಪ್ರದೇಶಗಳಲ್ಲಿ ಗಿಡಗಳ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ.
ಒಂದು ಹೆಣ್ಣು ಪತಂಗವು ಸರಾಸರಿ 150 ರಿಂದ 200 ಹಸಿರು ಮಿಶ್ರಿತ ಮೊಟ್ಟೆಗಳನ್ನು ಗರಿಯ ತಳಭಾಗದಲ್ಲಿ ಗುಂಪು ಗುಂಪಾಗಿ ಇಡುತ್ತವೆ, 4-5 ದಿನಗಳ ನಂತರ ಮೊಟ್ಟೆ ಒಡೆದು ಮರಿಗಳು ಹೊರಬಂದು 18-28 ದಿನಗಳವರೆಗೆ ಬೆಳೆಗಳಿಗೆ ಹಾನಿ ಮಾಡುತ್ತವೆ ಮತ್ತು 7-13 ದಿನಗಳಲ್ಲಿ ಮಣ್ಣಿನಲ್ಲಿ ಕೋಶಾ ವ್ಯಸ್ಥೆಯಲ್ಲಿರುತ್ತವೆ, ಒಟ್ಟು 30-45 ದಿನಗಳಲ್ಲಿ ಸೈನಿಕ ಹುಳು ಜೀವನ ಚಕ್ರವನ್ನು ಪೂರ್ಣಗೊಳಿಸುತ್ತವೆ, ಈ ಕೀಟವು ಹಗಲು ವೇಳೆಯಲ್ಲಿ ಮಣ್ಣು ಕಾಂಡದ ಮಧ್ಯ ಮತ್ತು ಗರಿಗಳ ತಳ ಭಾಗದಲ್ಲಿ ವಾಸಿಸುತ್ತವೆ ಸಂಜೆಯ ವೇಳೆ ಹುಳುಗಳು ಚಟುವಟಿಕೆ ಪ್ರಾರಂಭಿಸಿ ಬೆಳೆಯ ಎಲೆಯನ್ನು ಸಂಪೂರ್ಣವಾಗಿ ತಿಂದು ಹಾಕುತ್ತವೆ ತೀವ್ರವಾಗಿ ಹಾನಿಗೊಳಗಾದ ಬೆಳೆಯಲ್ಲಿ ಎಲೆಯ ದಿಂಡು ಕಾಣಸಿಗುತ್ತವೆ ಎಂದು ಮಾಹಿತಿ ನೀಡಿ ಕೃಷಿ ಇಲಾಖೆ ಸೂಚಿಸಿದ ಔಷಧಿ ಸಿಂಪಡಿಸುವ ಮೂಲಕ ರೋಗ ಹತೋಟಿಗೆ ತರಬಹುದು ಹೆಚ್ಚಿನ ಮಾಹಿತಿಗಾಗಿ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದಲ್ಲಿನ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದರು.