ಬೆಂಗಳೂರು: ಪಂಚಮಸಾಲಿ ಸಮಾಜದ ಶಾಂತಿಯುತ ಪ್ರತಿಭಟನೆ, ಹೋರಾಟಗಾರರ ಮೇಲೆ ಸರಕಾರವು ಲಾಠಿಚಾರ್ಜ್ ನಡೆಸಿ ಅಮಾನವೀಯವಾಗಿ ವರ್ತಿಸಿದೆ ಎಂದು ಬಿಜೆಪಿ ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಅವರು ಆಕ್ಷೇಪಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾಜಿಕ ನ್ಯಾಯದಡಿ ಪಂಚಮಸಾಲಿಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿ ಎಂದು ಆಗ್ರಹಿಸಿದರು. ನಿನ್ನೆ ನಡೆದ ಲಾಠಿಚಾರ್ಜ್ ಸಂಬಂಧ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ಮಾಡಿಸುವಂತೆ ಒತ್ತಾಯವನ್ನು ಮುಂದಿಟ್ಟರು. ಬೆಳಗಾವಿಯಲ್ಲಿ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ಆಗ ನಡೆಸಿದ ಲಾಠಿಚಾರ್ಜ್‌ನಿಂದ ಹೋರಾಟದಲ್ಲಿ ಪಾಲ್ಗೊಂಡಿದ್ದ ನೂರಾರು ಜನ ಲಿಂಗಾಯತ ಸಮುದಾಯಕ್ಕೆ ಸೇರಿದ ಪಂಚಮಸಾಲಿ ರೈತರು ಗಾಯಗೊಂಡಿದ್ದಾರೆ. ಸರಕಾರದ್ದು ಸರ್ವಾಧಿಕಾರಿ ನಡೆ, ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಖಂಡಿಸಿದರು.
೨ ಎ ಮೀಸಲಾತಿ ಸಂಬಂಧ ಈ ಸರಕಾರ ಬಂದ ಆರಂಭದಿಂದ ಅವರ ಬೇಡಿಕೆಗಳನ್ನು ಪುನರುಚ್ಚಾರ ಮಾಡುತ್ತಿದ್ದಾರೆ. ಬಿಜೆಪಿ ಸರಕಾರ ಇದ್ದಾಗ ೨ ಸಿ, ೨ ಡಿ ಅಡಿ ಎರಡು ರೀತಿ ಮೀಸಲಾತಿ ಕೊಟ್ಟು, ಅದರಡಿಯಲ್ಲಿ ವಿವಿಧ ಸಮುದಾಯಗಳನ್ನು ಒಟ್ಟು ಸೇರಿಸಿ ಮೀಸಲಾತಿ ಹೆಚ್ಚಿಸುವ ಕೆಲಸ ಮಾಡಿತ್ತು ಎಂದು ವಿವರಿಸಿದರು. ೨ ಸಿಗೆ ಶೇ ೪ ಮೀಸಲಾತಿ ಇದ್ದುದನ್ನು ಶೇ ೬ ಮಾಡಿದ್ದು, ೨ ಡಿ ಅಡಿ ಶೇ ೫ ಇದ್ದುದನ್ನು ಶೇ ೭ ಮಾಡಿದ್ದರು. ಪಂಚಮಸಾಲಿಗಳನ್ನೂ ೨ ಡಿ ವ್ಯಾಪ್ತಿ ಒಳಗಡೆ ತರುವ ಕೆಲಸ ಮಾಡಲಾಗಿತ್ತು. ಅದನ್ನು ಈ ಕಾಂಗ್ರೆಸ್ ಸರಕಾರ ಅನುಷ್ಠಾನ ಮಾಡಿಲ್ಲ. ೨ ಎ ಮೀಸಲಾತಿ ಬಗ್ಗೆಯೂ ಸರಿಯಾಗಿ ಸ್ಪಂದಿಸಿಲ್ಲ; ಈ ಮೂಲಕ ಹೋರಾಟಕ್ಕಿಳಿಯುವ ಅನಿವಾರ್ಯತೆಯನ್ನು ಸೃಷ್ಟಿ ಮಾಡಿದ್ದೇ ಆಳುವ ಕಾಂಗ್ರೆಸ್ ಸರಕಾರ ಎಂದು ಆಕ್ಷೇಪ ವ್ಯಕ್ತಪಡಿಸಿದರು.