ಬೆಂಗಳೂರು: ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶದಲ್ಲಿ ಕನ್ನಡಿಗರಿಗೆ ತೀವ್ರ ಅನ್ಯಾಯ ಆಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಟಿ.ಎ ನಾರಾಯಣಗೌಡ ಆತಂಕ ವ್ಯಕ್ತಪಡಿಸಿದರು.
ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಗಾಂಧಿನಗರದ ಕರವೇ ಕೇಂದ್ರ ಕಚೇರಿಯಿಂದ ವಿಧಾನಸೌಧದವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ಕಾವೇರಿ ಕಣಿವೆ ಪ್ರದೇಶದಲ್ಲಿ ತೀವ್ರ ತರವಾದ ಬರಗಾಲವಿದ್ದರೂ ತಮಿಳುನಾಡಿಗೆ ಮತ್ತೆ ೧೫ ದಿನಗಳ ಕಾಲ ೫೦೦೦ ಕ್ಯೂಸೆಕ್ ನೀರು ಹರಿಸಲು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಯಾವುದೇ ಕಾರಣಕ್ಕೂ ಪಾಲಿಸಬಾರದು ಎಂದು ಆಗ್ರಹಿಸಿದರು.
ಸರ್ಕಾರವು ಪೊಲೀಸರನ್ನು ಬಿಟ್ಟು ನಮ್ಮನ್ನೆಲ್ಲ ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಎಂಥ ಪರಿಸ್ಥಿತಿ ಬಂದರೂ ನಮ್ಮ ಪ್ರತಿಭಟನೆಯನ್ನು ನಾವು ನಿಲ್ಲಿಸುವುದಿಲ್ಲ. ನಾಳೆ ೩೧ ಜಿಲ್ಲೆಗಳಲ್ಲೂ ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಷ್ಟ್ರದ ರಾಜಧಾನಿ ದೆಹಲಿಯಲ್ಲೂ ಕರ್ನಾಟಕ ರಕ್ಷಣಾ ವೇದಿಕೆ ಪ್ರತಿಭಟನೆಯನ್ನು ನಡೆಸಲು ಮುಂದಾಗುತ್ತದೆ. ನಮ್ಮ ಸಾವಿರಾರರು ಕಾರ್ಯಕರ್ತರನ್ನು ಬಂಧಿಸಿದರೂ ನಮ್ಮ ಚಳವಳಿ ಹಂತ ಹಂತವಾಗಿ ಮುಂದುವರಿಯುತ್ತದೆ. ಯಾವುದೇ ಕಾರಣಕ್ಕೂ ರಾಜ್ಯದ ರೈತರಿಗೆ ಹಾಗೂ ಜನರಿಗೆ ಮೋಸವಾಗಲು ಬಿಡುವುದಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಸಣ್ಣೀರಪ್ಪ, ರಾಜ್ಯ ಉಪಾಧ್ಯಕ್ಪ ಪಿ. ಆಂಜನಪ್ಪ, ಪುಟ್ಟೇಗೌಡ, ವೀರಭದ್ರಪ್ಪ, ರಾಜ್ಯ ಸಂಘಟನಾ ಕಾರ್ಯದರ್ಶಿ ಅಬ್ಬಿಗೆರೆ ವಿನೋದ್, ಶ್ವೇತ ಮೋಹನ್ ಸೇರಿದಂತೆ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.