ಮಂಡ್ಯ: ತಮ್ಮ ಜಮೀನಿನಲ್ಲಿ ಬೆಳೆದ ಕಬ್ಬು 14 -15 ತಿಂಗಳಾದರೂ ಕಟಾವು ಮಾಡದೆ ಸತಾಯಿಸುತ್ತಿರುವ ಜಿಲ್ಲಾಡಳಿತ ಹಾಗೂ ಮೈ ಶುಗರ್ ಕಾರ್ಖಾನೆ ವಿರುದ್ಧ ಘೋಷಣೆ ಕೂಗಿ ಕಬ್ಬು ಕಟಾವಿಗೆ ಒತ್ತಾಯಿಸಿ ಮಂಡ್ಯ ಜಿಲ್ಲಾಡಳಿತದ ವಿರುದ್ಧ ರೊಚ್ಚಿಗೆದ್ದ ರೈತರು ಡಿಸಿ ಕಚೇರಿ ಬಳಿ ಬೇವಿನ ಸೊಪ್ಪು ತಿಂದು ವಿನೂತನ ಪ್ರತಿಭಟನೆ ಮಾಡಿದರು.
ರೈತರಿಗೆ ಕಹಿ ಕೊಟ್ಟ ಜಿಲ್ಲಾಡಳಿತ ವಿರುದ್ಧ ಕಬ್ಬು ಕಟಾವಿಗೆ ಒತ್ತಾಯಿಸಿ ಮಂಡ್ಯ ತಾಲೂಕಿನ ಉಪ್ಪಾರಕನಹಳ್ಳಿ ಸೇರಿ ವಿವಿಧ ಗ್ರಾಮದ ರೈತರಿಂದ ಪ್ರತಿಭಟನೆ ಮಾಡಲಾಯಿತು.

ಕಟಾವು ಮಾಡಲು ಕಾರ್ಮಿಕರ ಕೊರತೆ ಇದೆ ಎಂದು ಸಬೂಬ್ ಹೇಳುತ್ತಿರುವ ಅಧಿಕಾರಿಗಳ ವಿರುದ್ಧ ರೈತರು ಬೇಸರ ವ್ಯಕ್ತಪಡಿಸಿದರು. ತಾವು ಕಟಾವು ಮಾಡದೆ, ಬೇರೆ ಕಾರ್ಖಾನೆಗೂ ಅವಕಾಶ ಕೊಡದೆ ಗದ್ದೆಯಲ್ಲಿ ಕಬ್ಬು ಹಾಗೆ ಉಳಿದಿದ್ದು ಕಟಾವಿಗೆ ಬಂದ ಕಬ್ಬನ್ನು ಕಟಾವು ಮಾಡದೆ ಜಿಲ್ಲಾಡಳಿತ ಹಾಗೂ ಕಾರ್ಖಾನೆ ದಿವ್ಯ ನಿರ್ಲಕ್ಷ ತೋರುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಯಿತು.
ಅಲ್ಲದೆ ಬ್ಯಾಂಕ್ ಗಳಿಂದ ರೈತರಿಗೆ ಸಾಲದ ನೋಟಿಸ್ ಬರುತ್ತಿದ್ದು, ತಕ್ಷಣವೇ ಕಬ್ಬು ಕಟಾವು ಮಾಡಿಸುವಂತೆ ರೈತರು ಆಗ್ರಹಿಸಿದರು. ನಂತರ ಪ್ರತಿಭಟನಾಕಾರರು ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು . ಪ್ರತಿಭಟನೆಯಲ್ಲಿ ಶಿವಕುಮಾರ್ ಆರಾಧ್ಯ, ಹೊಸಳ್ಳಿ ಶಿವು, ವಿವೇಕ್ ಸೇರಿ ಹಲವರು ಭಾಗಿಯಾಗಿದ್ದರು.