ಬೆಳಗಾವಿ: ಎಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೋ ಅಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೆ. ಎಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಇರುತ್ತಾಳೋ ಅಲ್ಲಿ ಸಂಗೊಳ್ಳಿ ರಾಯಣ್ಣ ಇರುತ್ತಾನೆ. ಹಾಗಾಗಿ ಲಿಂಗಾಯತ ಸಮಾಜಕ್ಕೂ ಕುರುಬ ಸಮಾಜಕ್ಕೂ ಅವಿನಾಭಾವ ಸಂಬಂಧವಿದೆ. ಸ್ವಾಮಿ ನಿಷ್ಠೆಗೆ ಇನ್ನೊಂದು ಹೆಸರೇ ಸಂಗೊಳ್ಳಿ ರಾಯಣ್ಣ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಇಂದು ಬೆಳಗಾವಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಶೆಫರ್ಡ್ಸ್ ಇಂಡಿಯಾ ಇಂಟರ್ ನ್ಯಾಷನಲ್ ನ ೯ನೇ ವಾರ್ಷಿಕ ರಾಷ್ಟ್ರೀಯ ಪ್ರತಿನಿಧಿಗಳ ಮಹಾ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು.
ಈ ಸಮಾವೇಶ ಬೆಳಗಾವಿಯಲ್ಲಿ ನಡೆಯುತ್ತಿರುವುದು ಖುಷಿ ತಂದಿದೆ. ಸಮಾಜದಲ್ಲಿ ಯಾವುದೇ ಶುಭ ಕಾರ್ಯ ನಡೆಯಲಿ ಕುರುಬ ಸಮಾಜದವರಿಂದಲೇ ಆರಂಭ ಮಾಡಿಸುವ ರೂಢಿ ಇದೆ. ಆದ್ದರಿಂದ ಕುರುಬ ಸಮಾಜದವರದು ಅಮೃತ ಹಸ್ತ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾತ್ಯತೀತ ತತ್ವದ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಅವರು ಕೇವಲ ಕುರುಬರ ಕಣ್ಮಣಿ ಅಲ್ಲ, ಸಮಸ್ತ ಸಮಾಜದ, ಸಮಸ್ತ ಕನ್ನಡಿಗರ ಕಣ್ಮಣಿ. ಪಕ್ಷಾತೀತವಾಗಿ ಅವರಿಗೆ ಅಭಿಮಾನಿಗಳಿರುವುದು ಹೆಮ್ಮೆಯ ವಿಷಯ ಎಂದು ನುಡಿದರು.
ಸಿದ್ದರಾಮಯ್ಯ ನನಗೆ ೩ ಬಾರಿ ಬಿ ಫಾರ್ಮ್ ನೀಡಿದ್ದಾರೆ. ಅವರಿಂದ ಕಲಿಯಬೇಕಾದದ್ದು ಇನ್ನೂ ಬಹಳಷ್ಟಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದ್ದೇವೆ. ಜಾತ್ಯತೀತವಾಗಿ, ಪಕ್ಷಾತೀತವಾಗಿ ೫ ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಒಳ್ಳೆಯ ಕೆಲಸ ಮಾಡಿದ್ದಕ್ಕೇ ಅವರು ೧೪ ಬಾರಿ ಬಜೆಟ್ ಮಂಡಿಸಿದ್ದಾರೆ. ಸಮಾಜದ ದೃವತಾರೆಯಾಗಿರುವ ಸಿದ್ದರಾಮಯ್ಯ ಹೀಗೇ ಬೆಳೆಯಬೇಕೆನ್ನುವುದು ಎಲ್ಲ ಸಮಾಜಗಳ ಆಶಯ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿಳಿಸಿದರು.