ಮೈಸೂರು: ಮೈಸೂರು ವಿಭಾಗದಿಂದ ಸಂಚರಿಸುವ ಪ್ಯಾಸೆಂಜರ್ ರೈಲುಗಳ ಪ್ರಯಾಣ ದರ ಕಡಿಮೆ ಮಾಡಬೇಕೆಂದು ಒತ್ತಾಯಿಸಿ ಭಾರತ ಕಮ್ಯುನಿಸ್ಟ್ ಪಕ್ಷದಿಂದ ನಗರದ ರೈಲು ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲಾಯಿತು.
ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೇಂದ್ರ ಸರ್ಕಾರ ದೇಶದಾದ್ಯಂತ ರೈಲ್ವೆ ವ್ಯವಸ್ಥೆ ರದ್ದುಪಡಿಸಿತ್ತು. ನಂತರ ಹಂತ ಹಂತವಾಗಿ ವಿಶೇಷ ರೈಲುಗಳ ಪ್ರಯಾಣ ಆರಂಭಿಸಿತ್ತು. ಈ ಸಂದರ್ಭದಲ್ಲಿ ಮೈಸೂರು ವಿಭಾಗದಿಂದ ಮೈಸೂರು-ಬೆಂಗಳೂರು, ಮೈಸೂರು-ಅರಸೀಕೆರೆ, ಮೈಸೂರು-ಚಾಮರಾಜನಗರ ನಡುವೆ ಸಂಚರಿಸುವ ಪ್ಯಾಸೆಂಜರ್ ರೈಲುಗಳ ದರವನ್ನು ದುಪ್ಪಟ್ಟು ಮಾಡಿ, ಹಿರಿಯ ನಾಗರಿಕರಿಗೆ, ಕಲಾವಿದರಿಗೆ ನೀಡುತ್ತಿದ್ದ ರಿಯಾಯಿತಿಯನ್ನೂ ರದ್ದುಪಡಿಸಿದೆ. ಕೋವಿಡ್‌ನಿಂದ ಯಥಾಸ್ಥಿತಿಗೆ ಮರಳಿದ್ದರೂ ಟಿಕೆಟ್ ದರ ಕಡಿಮೆ ಮಾಡಿಲ್ಲ. ಇದರಿಂದಾಗಿ ಕೂಲಿಗಾಗಿ ಹಳ್ಳಿಗಳಿಂದ ನಗರಕ್ಕೆ ಬರುವವರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಮೈಸೂರು ಬೆಂಗಳೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿನ ಹೆಸರಿನಲ್ಲಿ ಪ್ರಯಾಣಿಕರ ಹಗಲು ದರೋಡೆ ಮಾಡಲಾಗುತ್ತಿದೆ ಎಂದು ಕಿಡಿ ಕಾರಿದರು.
ಮೈಸೂರು ವಿಭಾಗದಿಂದ ಸಂಚರಿಸುವ ಮೈಸೂರು-ಬೆಂಗಳೂರು, ಮೈಸೂರು-ಅರಸೀಕೆರೆ, ಮೈಸೂರು-ಚಾಮರಾಜನಗರ ಪ್ಯಾಸೆಂಜರ್ ರೈಲಿನ ದರ ಕಡಿಮೆ ಮಾಡಬೇಕು. ಮೈಸೂರು-ಬೆಂಗಳೂರು ನಡುವೆ ಸಂಚರಿಸುವ ಮಾಲ್ಗುಡಿ ಎಕ್ಸ್‌ಪ್ರೆಸ್ ರೈಲಿನ ದರವನ್ನು ೬೫ ರೂಗೆ ನಿಗದಿ ಮಾಡಿ, ಶುಚಿತ್ವ ಕಾಪಾಡಿಕೊಳ್ಳಬೇಕು. ಹಿರಿಯ ನಾಗರಿಕರಿಗೆ, ಕಲಾವಿದರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಮರು ಜಾರಿ ಮಾಡಬೇಕು. ಸಾರ್ವಜನಿಕ ಪಾಸ್ ವಿತರಣೆಯ ಅಂತರದ ಮಿತಿಯನ್ನು ೧೫೦ ಕಿ.ಮೀನಿಂದ ೨೫೦ ಕಿ.ಮೀಗೆ ಏರಿಕೆ ಮಾಡಬೇಕು. ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳ ನಿಲುಗಡೆ ಶುಲ್ಕವನ್ನು ವೈಜ್ಞಾನಿಕವಾಗಿ ಮರು ಪರಿಶೀಲನೆ ಮಾಡಿ, ದ್ವಿಚಕ್ರ ವಾಹನಕ್ಕೆ ೧೦ ರೂ, ನಾಲ್ಕು ಚಕ್ರದ ವಾಹನಗಳಿಗೆ ೨೦ ರೂ ನಿಗದಿಪಡಿಸಬೇಕು. ಪ್ಲಾಟ್‌ಫಾರಂ ಟಿಕೆಟ್ ದರ ಪ್ರಯಾಣ ದರಕ್ಕಿಂತ ಹೆಚ್ಚಾಗಿದ್ದು ೫ ರೂ ದರ ನಿಗದಿ ಮಾಡಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಹೆಚ್.ಆರ್.ಶೇಷಾದ್ರಿ, ಹೆಚ್.ಬಿ.ರಾಮಕೃಷ್ಣ, ಸೋಮರಾಜೇ ಅರಸ್, ಕೆ.ಎಸ್.ರೇವಣ್ಣ, ಡಿ.ಜಗನ್ನಾಥ್ ಸೇರಿದಂತೆ ಹಲವರು ಭಾಗವಹಿಸಿದ್ದರು.