ಗುಂಡ್ಲುಪೇಟೆ: ತಾಲೂಕಿನ ವಿವಿಧ ಭಾಗದಲ್ಲಿ ಮೇ ತಿಂಗಳ ಅಂತ್ಯದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆ(ಪ್ರಕೃತಿ ವಿಕೋಪ)ಗೆ ನೆಲಕಚ್ಚಿದ್ದ ಬಾಳೆ ಫಸಲಿಗೆ ಸರ್ಕಾರ ಕೂಡಲೇ ಪರಿಹಾರ ನೀಡಬೇಕೆಂದು ರೈತ ಸಂಘಟನೆ ಜಿಲ್ಲಾ ಉಪಾಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದರು.
ಬಾಳೆ ಫಸಲು ವಾರ್ಷಿಕ ಬೆಳೆ ಎಂಬ ಕಾರಣಕ್ಕೆ ಲಾಭದ ನಿರೀಕ್ಷೆಯಲ್ಲಿ ರೈತರು ಸಾಕಷ್ಟು ಹಣ ಖರ್ಚು ಮಾಡಿ ನೂರಾರು ಎಕರೆ ಬಾಳೆ ಫಸಲು ಬೆಳೆದಿದ್ದರು. ಆದರೆ ಮೇ ತಿಂಗಳಲ್ಲಿ ಬಿದ್ದ ಭಾರಿ ಬಿರುಗಾಳಿ ಸಹಿತ ಮಳೆಗೆ ತಾಲೂಕಿನ ಹಲವು ರೈತರ ಬಾಳೆ ಬೆಳೆ ಸಂಪೂರ್ಣ ನೆಲ ಕಚ್ಚಿತು. ಇದರಿಂದ ಕೃಷಿ ಚಟುವಟಿಕೆಗಳಿಗೆ ದುಬಾರಿ ಮೊತ್ತದ ಹಣ ಖರ್ಚು ಮಾಡಿದ್ದ ರೈತ ತಲೆ ಮೇಲೆ ಕೈಹೊತ್ತು ಕೂರಬೇಕಾಯಿತು. ಪ್ರಕೃತಿ ವಿಕೋಪದ ಕಾರಣಕ್ಕೆ ಆದ ಬೆಳೆನಷ್ಟಕ್ಕೆ ಪರಿಹಾರ ಪಡೆಯಲೆಂದು ರೈತರು ಅರ್ಜಿ ಸಲ್ಲಿಸಿದ್ದಾರೆ. ಆದರೆ ಸರ್ಕಾರದಿಂದ ಎರಡು ತಿಂಗಳಾದರೂ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ಜಿಲ್ಲಾಡಳಿತ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಪರಿಹಾರದ ಹಣ ಕೊಡಿಸಬೇಕು. ಇಲ್ಲವಾದಲ್ಲಿ ರೈತರೊಡಗೂಡಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ನೂತನವಾಗಿ ರಚನೆಯಾಗಿರುವ ಕಾಂಗ್ರೆಸ್ ಸರ್ಕಾರ ರೈತರಿಗೆ ಪೂರಕವಾಗಿ ಸ್ಪಂದಿಸಿದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒಪ್ಪಿಗೆ ನೀಡಿದೆ. ಅದರಂತೆ ತಾಲೂಕಿನ ಮೇ ತಿಂಗಳ ಅಂತ್ಯದಲ್ಲಿ ಸುರಿದ ಬಿರುಗಾಳಿ ಸಹಿತ ಮಳೆಗೆ ನೆಲಕಚ್ಚಿದ್ದ ಬಾಳೆ ಫಸಲಿಗೆ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.