ಗುಂಡ್ಲುಪೇಟೆ: ಕೇರಳದಲ್ಲಿ ಕೊರೊನಾ ರೂಪಾಂತರಿ ವೈರಸ್ ಜೆ.ಎನ್-೧ ಹೆಚ್ಚಳವಾಗುತ್ತಿರುವ ಹಿನ್ನೆಲೆ ತಾಲೂಕಿನ ಗಡಿ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿ ಆರೋಗ್ಯ ಇಲಾಖೆ ವತಿಯಿಂದ ತಪಾಸಣೆ ಆರಂಭಿಸಿ, ಕಟ್ಟೆಚ್ಚರ ವಹಿಸಲಾಗಿದೆ.
ಬಂಡೀಪುರದ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ರಾಜ್ಯ ಪ್ರವೇಶಿಸುವ ಪ್ರತಿಯೊಂದು ವಾಹನ ಚಾಲಕರು, ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಗುತ್ತಿದ್ದು, ಆರೋಗ್ಯ ಇಲಾಖೆಯ ವತಿಯಿಂದ ಇಬ್ಬರು ಕಮ್ಯೂನಿಟಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ತಪಾಸಣೆ ವೇಳೆ ಜ್ವರ, ನೆಗಡಿ, ಕೆಮ್ಮು ಕಂಡುಬಂದರೆ ಅಂತವರ ಹೆಸರು, ವಿಳಾಸ ಮತ್ತು ಮೊಬೈಲ್ ನಂಬರ್ ಪಡೆದು, ಪ್ರಯಾಣಿಕರು ಎಲ್ಲಿಗೆ ತೆರಳುತ್ತಾರೋ ಆ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮಾಹಿತಿ ರವಾನಿಸಲಾಗುತ್ತಿದೆ.
ಗಡಿ ಅಂಚಿನ ಗ್ರಾಮಗಳ ಮೇಲೆ ನಿಗಾ: ಕೇರಳ ಗಡಿ ಹಂಚಿಕೊಂಡಿರುವ ಕನ್ನೇಗಾಲ, ಬೇರಂಬಾಡಿ, ಮದ್ದೂರು, ಭೀಮನಬೀಡು, ಕೂತನೂರು ಸೇರಿದಂತೆ ಇನ್ನಿತರ ಹಲವು ಗ್ರಾಮಸ್ಥರು ಪ್ರತಿನಿತ್ಯ ಕೂಲಿ ಕೆಲಸಕ್ಕೆಂದು ಕೇರಳಕ್ಕೆ ತೆರಳಿ ವಾಪಸ್ ಆಗುತ್ತಾರೆ. ಇಂತವರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದ್ದು, ಪ್ರತಿ ಮನೆ ಮನೆಗೆ ತೆರಳಿ ಆರೋಗ್ಯ ಸಮಸ್ಯೆ ಕುರಿತು ವಿಚಾರಣೆ ನಡೆಸಲು ಆಯಾಯ ಸ್ಥಳೀಯ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ಜ್ವರ ಅಥವಾ ಕೆಮ್ಮು ಸೇರಿದಂತೆ ಕೋವಿಡ್ ಲಕ್ಷಣ ಕಂಡು ಬಂದರೆ ತಕ್ಷಣ ಅಂತವರನ್ನು ತಪಾಸಣೆ ಒಳಪಡಿಸಲು ಸಿದ್ದತೆ ನಡೆಸಲಾಗಿದೆ.
ಶಬರಿಮಲೆಗೆ ಯಾತ್ರಿಗಳ ಮೇಲೆ ಹದ್ದಿನ ಕಣ್ಣು: ರಾಜ್ಯದಿಂದ ಸಾವಿರಾರು ಜನರು ನೂರಾರು ವಾಹನಗಳಲ್ಲಿ ಶಬರಿಮಲೆಗೆ ತೆರಳಿ ಮೂಲೆಹೊಳೆ ಚೆಕ್ ಪೋಸ್ಟ್ ಮೂಲಕ ವಾಪಸ್ ಆಗುತ್ತಿದ್ದಾರೆ. ಇವರ ಮೇಲೆ ಆರೋಗ್ಯ ಇಲಾಖೆ ಹದ್ದಿನ ಕಣ್ಣಿಟ್ಟಿದ್ದು, ಪ್ರತಿಯೊಬ್ಬರ ವ್ಯಕ್ತಿಯನ್ನು ಕಟ್ಟುನಿಟ್ಟಾಗಿ ತಪಾಸಣೆ ನಡೆಸಲಾಗುತ್ತಿದೆ. ಕೇರಳದಲ್ಲಿ ಕೊರೊನಾ ರೂಪಾಂತರಿ ವೈರಸ್ ಜೆ.ಎನ್-೧ ಹೆಚ್ಚಳವಾಗುತ್ತಿರುವ ಕಾರಣ ರಾಜ್ಯದ ಜನರು ಶಬರಿಮಲೆ ಯಾತ್ರೆಯನ್ನು ಕೈಬಿಡಲು ಅಥವಾ ಮುಂದೂಡಬೇಕೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.
ಆಕ್ಸಿಜನ್ ಸಮೇತ ಐದು ಬೆಡ್ ವ್ಯವಸ್ಥೆ: ಕೊರೊನಾ ರೂಪಾಂತರಿ ವೈರಸ್‌ನ ತೀವ್ರತೆ ಹೆಚ್ಚು ಕಂಡು ಬಂದರೆ ಮೂಲೆಹೊಳೆ ಚೆಕ್ ಪೋಸ್ಟ್‌ನಲ್ಲಿಯೇ ರಾಪಿಡ್ ಟೆಸ್ಟ್ ಮಾಡಲು ಸಿದ್ದತೆ ನಡೆಸಲಾಗಿದೆ. ಜೊತೆಗೆ ಪಟ್ಟಣದ ತಾಲೂಕು ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ಆಕ್ಸಿಜನ್ ಒಳಗೊಂಡ ೫ ಬೆಡ್ ವ್ಯವಸ್ಥೆ ಮಾಡಲಾಗಿದ್ದು, ಪ್ರಕರಣ ಹೆಚ್ಚಾದರೆ ಕಗ್ಗಳದಹುಂಡಿ ಆರೋಗ್ಯ ಕೇಂದ್ರದಲ್ಲಿಯು ಸಹ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗಿದೆ ಎಂದು ಆರೋಗ್ಯಾಧಿಕಾರಿ ಅಲೀಂ ಪಾಷಾ ಮಾಹಿತಿ ನೀಡಿದರು.
ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿ ಪರಿಶೀಲನೆ: ಕೇರಳ ಗಡಿ ಮೂಲೆಹೊಳೆ ಚೆಕ್ ಪೋಸ್ಟ್ ನಲ್ಲಿ ಕೊರೊನಾ ರೂಪಾಂತರಿ ವೈರಸ್ ಜೆ.ಎನ್-೧ ಕುರಿತು ತಪಾಸಣೆ ಆರಂಭಿಸಿದ ಹಿನ್ನೆಲೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಚಿದಂಬರಂ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಅಲೀಂ ಪಾಷಾ ಭೇಟಿ ನೀಡಿ, ಪರಿಶೀಲನೆ ನಡೆಸಿ ಪರಿಸ್ಥಿತಿ ಅವಲೋಕಿಸಿ, ಕಟ್ಟುನಿಟ್ಟಿನ ತಪಾಸಣೆ ನಡೆಸುವಂತೆ ಸೂಚನೆ ನೀಡಿದ್ದಾರೆ.