Saturday, December 13, 2025
Google search engine

Homeರಾಜ್ಯಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ: ಶಿವರಾಜ್ ತಂಗಡಗಿ

ಕನ್ನಡ ನಾಮಫಲಕ ಅಳವಡಿಕೆ ಕಡ್ಡಾಯ: ಶಿವರಾಜ್ ತಂಗಡಗಿ

ಬೆಳಗಾವಿ: ಕರ್ನಾಟಕದಾದ್ಯಂತ ಎಲ್ಲಾ ವಾಣಿಜ್ಯ ಸಂಸ್ಥೆಗಳು, ಕೈಗಾರಿಕೆಗಳು, ಟ್ರಸ್ಟ್ ನಡೆಸುವ ಸಂಸ್ಥೆಗಳು, ಆಸ್ಪತ್ರೆಗಳು, ಮನರಂಜನಾ ಕೇಂದ್ರಗಳು, ಹೋಟೆಲ್‌ ಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿ 15 ದಿನಗಳಿಂದ ಒಂದು ತಿಂಗಳೊಳಗೆ ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ. ಈ ಬಗ್ಗೆ ಕಡ್ಡಾಯ ಕನ್ನಡ ಭಾಷಾ ನಾಮಫಲಕ ಅಳವಡಿಕೆ ಕುರಿತು ನಿಗಾವಹಿಸಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಆದಷ್ಟೂ ಬೇಗ ರಾಜ್ಯದಲ್ಲಿ ನಿಯಮ ಸಂಪೂರ್ಣ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಡ್ಡಾಯವಾಗಿ ಕನ್ನಡ ನಾಮಫಲಕಗಳನ್ನು ಅಳವಡಿಸುವ ಸಂಬಂಧ ನಿಯಮಗಳನ್ನು ಈಗಾಗಲೇ ಕಾನೂನು ಮತ್ತು ಸಂಸದೀಯ ವ್ಯವಹಾರ ಇಲಾಖೆಗೆ ಅಂತಿಮ ಅನುಮೋದನೆಗಾಗಿ ಕಳುಹಿಸಲಾಗಿದೆ ಎಂದಿದ್ದು, ಮುಂದಿನ ಕೆಲವು ವಾರಗಳಲ್ಲಿ ಕಾರ್ಯವಿಧಾನ ಪೂರ್ಣಗೊಂಡ ನಂತರ, ರಾಜ್ಯಾದ್ಯಂತ ಆದೇಶ ಹೊರಡಿಸಲಾಗುವುದು ಎಂದು ಹೇಳಿದ್ದಾರೆ.

ಕನ್ನಡ ನಾಮಫಲಕ ಅಭಿಯಾನವು ಅನೇಕ ಜಿಲ್ಲೆಗಳಲ್ಲಿ ಹೆಚ್ಚು ಯಶಸ್ವಿಯಾಗಿದ್ದು, ಹನ್ನೊಂದು ಜಿಲ್ಲೆಗಳಲ್ಲಿ ಶೇ. 100 ಅನುಷ್ಠಾನ ಸಾಧಿಸಿದ್ದರೆ, ಉಳಿದವು ಶೇ.80 ಮತ್ತು 90 ರಷ್ಟು ಅನುಷ್ಠಾನಗೊಂಡಿವೆ. ಎಲ್ಲಾ ಜಿಲ್ಲೆಗಳಲ್ಲಿ ಸಂಪೂರ್ಣ ಅಳವಡಿಕೆ ಗುರಿಯನ್ನು ಸರ್ಕಾರ ಹೊಂದಿದೆ ಎಂದು ತಿಳಿಸಿದರು. ಈ ವೇಳೆ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಮಟ್ಟದ ಸಮಿತಿಯನ್ನು ರಚಿಸಲಾಗಿದೆ, ಇದರಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವರು, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ಇದ್ದಾರೆ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಸಮಿತಿಗಳು ಸಹ ಜಾರಿಯಲ್ಲಿವೆ. ಬೆಂಗಳೂರಿನಲ್ಲಿ ಎಂಟು ಮೇಲ್ವಿಚಾರಣಾ ವಲಯಗಳನ್ನು ರಚಿಸಲಾಗಿದ್ದು, ವಿಶೇಷ ತಪಾಸಣಾ ತಂಡವನ್ನು ಸ್ಥಾಪಿಸಲಾಗುವುದು. ಹೊರಗುತ್ತಿಗೆ ಆಧಾರದ ಮೇಲೆ ವಾಹನಗಳನ್ನು ನೇಮಿಸಿಕೊಳ್ಳಲಾಗುವುದು ಮತ್ತು ಮೇಲ್ವಿಚಾರಣಾ ಕೋಶಕ್ಕಾಗಿ ಕಚೇರಿ ಈಗಾಗಲೇ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ ಎಂದು ಹೇಳಿದರು.

ನಾಮಫಲಕ ಹಾಕದಿದ್ದರೆ ಮೊದಲ ಅಪರಾಧಕ್ಕೆ 5,000 ರೂ., ಎರಡನೇ ಅಪರಾಧಕ್ಕೆ 10,000 ರೂ. ಮತ್ತು ನಂತರದ ಪ್ರತಿ ಉಲ್ಲಂಘನೆಗೆ 20,000 ರೂ. ದಂಡ ವಿಧಿಸಲಾಗುತ್ತದೆ ಎಂದು ಹೇಳಿದರು. ಎಲ್ಲಾ ನಾಮ ಫಲಕಗಳಲ್ಲಿ 60:40 ಕನ್ನಡ ಬೋರ್ಡ್ ಪ್ರದರ್ಶಿಸಬೇಕು, ಹೆಚ್ಚಿನ ಭಾಗ ಕನ್ನಡವನ್ನು ಆಕ್ರಮಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದರು. ಈ ವೇಳೆ ರಾಜ್ಯಾದ್ಯಂತ ಕನ್ನಡದ ಕಡ್ಡಾಯ ಬಳಕೆಯನ್ನು ಜಾರಿಗೊಳಿಸುವಲ್ಲಿ ಸರ್ಕಾರ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ತಂಗಡಗಿ ಸ್ಪಷ್ಟಪಡಿಸಿದರು.

RELATED ARTICLES
- Advertisment -
Google search engine

Most Popular