Tuesday, January 6, 2026
Google search engine

Homeರಾಜ್ಯಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಚರ್ಚೆ ಬದಲು ಜನಪ್ರತಿನಿಧಿಗಳ ನಡುವೆ ಭಾರೀ ಜಗಳ

ಕೆಡಿಪಿ ಸಭೆಯಲ್ಲಿ ಅಭಿವೃದ್ಧಿ ಚರ್ಚೆ ಬದಲು ಜನಪ್ರತಿನಿಧಿಗಳ ನಡುವೆ ಭಾರೀ ಜಗಳ

ಬೀದರ್: ಜಿಲ್ಲೆಯ ಅಭಿವೃದ್ಧಿ ಕಾರ್ಯಗಳ ಕರಿತು ಚರ್ಚಿಸಬೇಕಾದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯು ರಣರಂಗವಾಗಿ ಮಾರ್ಪಟ್ಟ ಘಟನೆ ಜನವರಿ 5ರಂದು ಸೋಮವಾರ ನಡೆದಿದ್ದು, ವೇದಿಕೆಯ ಮೇಲಿದ್ದ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲೇ ಆಡಳಿತ ಪಕ್ಷದ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರು ಪರಸ್ಪರ ಸಂಘರ್ಷಕ್ಕೆ ಇಳಿದು, ಕೈ ಕೈ ಮಿಲಾಯಿಸಿದ ಪ್ರಸಂಗ ವರದಿಯಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರ ಅಧ್ಯಕ್ಷತೆಯಲ್ಲಿ ಮತ್ತು ಸಚಿವ ರಹಿಂ ಖಾನ್ ಅವರ ಉಪಸ್ಥಿತಿಯಲ್ಲಿ ಸೋಮವಾರ ಕೆಡಿಪಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಅಭಿವೃದ್ಧಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಯುತ್ತಿದ್ದ ವೇಳೆ, ಜಮೀನು ಒತ್ತುವರಿ ವಿಷಯ ಪ್ರಸ್ತಾಪವಾಯಿತು.

ಈ ನಿರ್ದಿಷ್ಟ ವಿಷಯದ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ ಸಭೆಯ ಚಿತ್ರಣವೇ ಬದಲಾಯಿತಲ್ಲದೆ, ಒತ್ತುವರಿ ವಿಚಾರವಾಗಿ ಬಿಜೆಪಿ ಶಾಸಕ ಸಿದ್ದು ಪಾಟೀಲ್ ಹಾಗೂ ಕಾಂಗ್ರೆಸ್‌ ವಿಧಾನ ಪರಿಷತ್ ಸದಸ್ಯ ಭೀಮರಾವ್ ಪಾಟೀಲ್ ಅವರ ನಡುವೆ ಮಾತಿನ ಚಕಮಕಿ ಆರಂಭವಾಯಿತು. ಆರಂಭದಲ್ಲಿ ಸಣ್ಣದಾಗಿ ಶುರುವಾದ ವಾಗ್ವಾದ ಕ್ಷಣಾರ್ಧದಲ್ಲಿ ವಿಕೋಪಕ್ಕೆ ತಿರುಗಿತು. ಇಬ್ಬರೂ ನಾಯಕರು ತಾಳ್ಮೆ ಕಳೆದುಕೊಂಡು ಬಾಯಿಗೆ ಬಂದಂತೆ ಬೈದಾಡಿಕೊಳ್ಳಲಾರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ವೇದಿಕೆಯ ಮೇಲೆ ಸಚಿವರು ಮತ್ತು ಎದುರುಗಡೆ ಹಿರಿಯ ಅಧಿಕಾರಿಗಳು ಕುಳಿತಿದ್ದರೂ ಲೆಕ್ಕಿಸದೆ, ಇಬ್ಬರೂ ಜನಪ್ರತಿನಿಧಿಗಳು ಆಕ್ರೋಶಗೊಂಡು ಪರಸ್ಪರ ದೈಹಿಕವಾಗಿ ಹಲ್ಲೆ ಮಾಡುವ ಹಂತಕ್ಕೆ ಮುಂದಾದರಲ್ಲದೆ ಒಬ್ಬರ ಕೈ ಇನ್ನೊಬ್ಬರು ಹಿಡಿದು ಎಳೆದಾಡಲಾರಂಭಿಸಿದರು.

ಈ ಅನಿರೀಕ್ಷಿತ ಘಟನೆಯಿಂದ ಸಭೆಯಲ್ಲಿದ್ದ ಅಧಿಕಾರಿಗಳು ಮತ್ತು ಇತರ ಸದಸ್ಯರು ಒಂದು ಕ್ಷಣ ದಂಗಾದರು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಮತ್ತು ಸಭೆಯ ಗಾಂಭೀರ್ಯ ಹಾಳಾಗುತ್ತಿರುವುದನ್ನು ಮನಗಂಡ ಸಚಿವ ಈಶ್ವರ್ ಖಂಡ್ರೆ ಅವರು, ಗಲಾಟೆಯನ್ನು ತಣ್ಣಗಾಗಿಸಲು ಯತ್ನಿಸಿದರು. ಆದರೆ ವಾತಾವರಣ ತಿಳಿಯಾಗದ ಕಾರಣ ಮತ್ತು ಗದ್ದಲ ಮುಂದುವರಿದಿದ್ದರಿಂದ, ಅನಿವಾರ್ಯವಾಗಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ ಸಭೆಯನ್ನು ಮುಂದೂಡಲಾಗಿದೆ ಎಂದು ಸಚಿವರು ಘೋಷಿಸಿದರು. ಅಲ್ಲದೆ ಜನಪ್ರತಿನಿಧಿಗಳೇ ಸಾರ್ವಜನಿಕ ವೇದಿಕೆಯಲ್ಲಿ ಈ ರೀತಿ ನಡೆದುಕೊಂಡಿದ್ದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.

RELATED ARTICLES
- Advertisment -
Google search engine

Most Popular