ಬೆಳಗಾವಿ: ಕಾಡಾನೆ ಸೆರೆ ಕಾರ್ಯಾಚರಣೆ ಮಾರ್ಗಸೂಚಿಯಲ್ಲಿ ನ್ಯೂನತೆ ಕಂಡುಬಂದಿವೆ. ಹಾಗಾಗಿ ಅದನ್ನು ಬದಲಿಸಿ, ಮುಂದೆ ದುರ್ಘಟನೆ ನಡೆಯದಂತೆ ಕ್ರಮ ವಹಿಸುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು
ಇಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಈಗಿರುವ ಮಾರ್ಗಸೂಚಿಯಲ್ಲಿ ಬಹಳಷ್ಟು ನ್ಯೂನತೆಗಳಿವೆ. ಪುಂಡಾನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆ ಕರ್ನಾಟಕ ಬಿಟ್ಟರೆ ಬೇರೆಡೆ ನಡೆಯುವುದಿಲ್ಲ. ಹಾಗಾಗಿ ತಜ್ಞರ ಸಲಹೆ ಪಡೆದು ಮುಂದುವರಿಯುತ್ತೇವೆ ಎಂದರು.
ಅರ್ಜುನ ಆನೆಯ ಸಾವಿನ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಮಗ್ರ ರೀತಿಯ ವರದಿ ತರಿಸಿಕೊಂಡು ತನಿಖೆ ಮಾಡುತ್ತೇವೆ. ಲೋಪ ಕಂಡುಬಂದರೆ ಕ್ರಮ ಜರುಗಿಸುತ್ತೇವೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯಲ್ಲಿ ಅರಣ್ಯಾಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಖಂಡ್ರೆ, ‘ಭ್ರಷ್ಟಾಚಾರದಲ್ಲಿ ತೊಡಗಿದ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ’ ಎಂದರು.