ಹನೂರು: ಮಲೆ ಮಹದೇಶ್ವರ ಬೆಟ್ಟದ ಕ್ಷೇತ್ರದಲ್ಲಿ ಭಕ್ತಾದಿಗಳ ಸೌಕರ್ಯಕ್ಕಾಗಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಪಶು ಸಂಗೋಪನೆ, ರೇಷ್ಮೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರು ತಿಳಿಸಿದರು.
ಮಲೆ ಮಹದೇಶ್ವರ ಬೆಟ್ಟದ ನಾಗಮಲೆ ಸಭಾಂಗಣದಲ್ಲಿ ಭಾನುವಾರ ಸಂಜೆ ಮಲೆಮಹದೇಶ್ವರ ಸ್ವಾಮಿ ಬೆಟ್ಟ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ಸಂಬಂಧ ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದರು.
ಕ್ಷೇತ್ರದಲ್ಲಿ ಈಗಾಗಲೇ ಕೈಗೆತ್ತಿಕೊಂಡಿರುವ ಕಾಮಗಾರಿಗಳ ವಿವರ ಪಡೆಯಲಾಗಿದೆ.ಅಧಿಕಾರಿಗಳು ಹಾಗೂ ಗುತ್ತಿಗೆದಾರರೊಂದಿಗೆ ಚರ್ಚಿಸಲಾಗಿದೆ. ವಿಳಂಬ ಮಾಡದೇ ತ್ವರಿತವಾಗಿ ಕಾಮಗಾರಿ ಮುಗಿಸಲು ನಿರ್ದೆಶನ ನೀಡಲಾಗಿದೆ ಎಂದರು.
ಮಲೆ ಮಹದೇಶ್ವರರ ಪ್ರತಿಮೆ ಬಳಿ ನಡೆಯುತ್ತಿರುವ ಇನ್ನಿತರ ಕೆಲಸಗಳ ಬಗ್ಗೆ ಪರಿಶೀಲಿಸಿದ್ದು ನಿಗದಿತ ಅವಧಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ರಸ್ತೆ ಇತರೆ ಮೂಲ ಸೌಕರ್ಯಗಳ ಅಭಿವೃದ್ಧಿ ಕೆಲಸ ಕಾಲಮಿತಿಯೊಳಗೆ ಕೈಗೊಳ್ಳುವಂತೆ ತಿಳಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ನುಡಿದರು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರು ಆಗಿರುವ ಮುಖ್ಯಮಂತ್ರಿಯವರು ಸಹ ಕ್ಷೇತ್ರದಲ್ಲಿ ಪ್ರಾಧಿಕಾರದ ಸಭೆ ನಡೆಸಲಿದ್ದಾರೆ.ಇದಕ್ಕೂ ಮೊದಲು ಕ್ಷೇತ್ರದಲ್ಲಿ ಆಗಬೇಕಿರುವ ಬಾಕಿ ಕೆಲಸ ಕಾರ್ಯಗಳನ್ನು ಸಮರ್ಪವಾಗಿ ನಿರ್ವಹಣೆ ಮಾಡುವಂತೆ ತಿಳಿಸಲಾಗಿದೆ ಎಂದರು.
ಕ್ಷೇತ್ರಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು ಅವರ ಅನೂಕೂಲಕ್ಕೆ ತಕ್ಕಂತೆ ಮತ್ತಷ್ಟು ಸೌಲಭ್ಯಗಳು ಒದಗಿಸಬೇಕಿದೆ.ಈ ನಿಟ್ಟಿನಲ್ಲಿ ನಾನು ಇಂದು ಮೊದಲ ಸಭೆ ನಡೆಸಿದ್ದೇನೆ.ಇನ್ನಷ್ಟು ವಿವರವಾಗಿ ಚರ್ಚಿಸಿ ಅಗತ್ಯ ಸೌಕರ್ಯಗಳನ್ನು ಒದಗಿಸಲಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ವೆಂಕಟೇಶ್ ಅವರು ತಿಳಿಸಿದರು.
ಸಾಲೂರು ಶ್ರೀಗಳು, ಶಾಸಕರಾದ ಸಿ.ಪುಟ್ಟ ರಂಗ ಶೆಟ್ಟಿ, ಎ.ಆರ್.ಕೃಷ್ಣ ಮೂರ್ತಿ, ಎಂ.ಆರ್.ಮಂಜುನಾಥ್, ಎಚ್.ಎಂ.ಗಣೇಶ್ ಪ್ರಸಾದ್,ವಿಧಾನ ಪರಿಷತ್ತಿನ ಸದಸ್ಯರಾದ ಮರಿತಿಬ್ಬೇಗೌಡ, ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪನಾಗ್, ಹೆಚ್ಚುವರಿ ಜಿಲ್ಲಾಧಿಕಾರಿ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಗೀತಾ ಹುಡೇದ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹು, ಉಪವಿಭಾಗಾಧಿಕಾರಿಮಹೇಶ್, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.