ಮೈಸೂರು: ಸರ್ವೋಚ್ಚ ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸಿ ನಗರದ ಗನ್ ಹೌಸ್ ವೃತ್ತದಲ್ಲಿ ರಾತ್ರೋರಾತ್ರಿ ಪ್ರತಿಷ್ಠಾಪಿಸಿರುವ ಸುತ್ತೂರು ಶಿವರಾತ್ರಿ ರಾಜೇಂದ್ರಸ್ವಾಮೀಜಿಗಳ ಪ್ರತಿಮೆಯನ್ನು ತೆರವುಗೊಳಿಸುವಂತೆ ಸರ್ವಜನಾಂಗದ ಪ್ರಾತಿನಿದಿಕ ಸಂಸ್ಥೆ ವತಿಯಿಂದ ಕಾಲ್ನಡಿಗೆ ಜಾಥಾ ನಡೆಯಿತು. ನಗರದ ದೊಡ್ಡಕೆರೆ ಮೈದಾನದಲ್ಲಿ ಶನಿವಾರ ಜಮಾಯಿಸಿದ ಪ್ರತಿಭಟನಾಕಾರರು ಸಿದ್ಧಾರ್ಥನಗರದಲ್ಲಿರುವ ನೂತನ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಕಾಲ್ನಡಿಗೆ ಜಾಥಾ ನಡೆಸಿ ಅಕ್ರಮವಾಗಿ ನಿರ್ಮಾಣ ಮಾಡುತ್ತಿರುವ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ತೆರವುಗೊಳಿಸುವಂತೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಬಳಿ ಅಮರ್ ರಾಜೇ ಅರಸ್ ಮಾತನಾಡಿ, ಗನ್ ಹೌಸ್ ವೃತ್ತ ಅರಮನೆಯ ಸುತ್ತುವರಿದ ಜಾಗದಲ್ಲಿ ಇದೆ. ಮೈಸೂರಿಗೆ ಮೈಸೂರು ಅರಸರ ಕೊಡುಗೆ ಅಪಾರವಾಗಿದೆ. ಈ ಹಿನ್ನಲೆಯಲ್ಲಿ ಗನ್ ಹೌಸ್ ವೃತ್ತದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕು ಎಂದು ಅರಸು ಮಂಡಳಿ ವತಿಯಿಂದ ಮೈಸೂರು ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಅಲ್ಲಿನ ಅಧಿಕಾರಿಗಳು ಸುಪ್ರೀಂ ಕೋಟ್೯ ಆದೇಶ ವಿದ್ದು ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಯ ಮಧ್ಯದಲ್ಲಿ ಪುತ್ಥಳಿಗಳನ್ನು ನಿರ್ಮಾಣಮಾಡುವಂತಿಲ್ಲ ಎಂದು ಹೇಳಿದ್ದರು. ಇದಾದ ನಂತರ ಸುತ್ತೂರು ಮಠದವರು ತಮ್ಮಪ್ರಭಾವ ಬಳಸಿ ರಾಜೇಂದ್ರ ವೃತ್ತ ಎಂದು ಬೋಡ್೯ ಹಾಕಿದರು. ಆದೃ ಯಾವ ಅಧಿಕಾರಿಗಳು ಇದು ತಪ್ಪು ಎಂದು ಬೋಡ್೯ ತೆರವುಗೊಳಿಸಲಿಲ್ಲ. ನಂತರ ರಾತ್ರೋರಾತ್ರಿ ಶಿವರಾತ್ರಿ ರಾಜೇಂದ್ರ ಸ್ವಾಮೀಜಿಗಳ ಪ್ರತಿಮೆಯನ್ನು ಅಕ್ರಮವಾಗಿ ನಿಲ್ಲಿಸಿದ್ದಾರೆ ಎಂದು ಆರೋಪಿಸಿದರು.
ರಾಜೇಂದ್ರ ಸ್ವಾಮೀಜಿಗಳ ಬಗ್ಗೆ ನಮಗೆ ಅಪಾರವಾದ ಗೌರವವಿದೆ. ಈ ಪ್ರಕರಣ ನ್ಯಾಯಾಲಯದಲ್ಲಿ ಇರಬೇಕಾದರೆ ಹೇಗೆ ಇಲ್ಲಿ ಪ್ರತಿಮೆಯನ್ನು ನಿರ್ಮಾಣ ಮಾಡಿದರು. ಈ ಪ್ರತಿಮೆಯನ್ನು ತಂದು ನಿಲ್ಲಿಸಿದವರು ಯಾರು ಎಂದರೆ ಯಾರೂ ಸಹ ಉತ್ತರ ನೀಡುತ್ತಿಲ್ಲ. ಇಲ್ಲಿ ಪ್ರತಿಮೆ ನಿರ್ಮಾಣ ಮಾಡಿರುವುದು ಅಕ್ರಮ. ನ್ಯಾಯಾಲಯದ ತೀರ್ಪು ಬಂದರೆ ಪ್ರತಿಮೆಯನ್ನು ತೆರವುಗೊಳಿಸಬೇಕಾಗುತ್ತದೆ. ಇದು ರಾಜೇಂದ್ರ ಸ್ವಾಮೀಜಿಗಳಿಗೆ ಮಾಡಿದ ಅವಮಾನ ಎಂದು ಹೇಳಿದರು.
ಈಗಾಗಾಲೇ ಸಾಕಷ್ಟು ವಿರೋಧದ ನಡುವೆ ಆ ವೃತ್ತದಲ್ಲಿ ಕಾಮಗಾರಿಯನ್ನು ಮಾಡಲಾಗುತ್ತಿದೆ.ಕೂಡಲೇ ಇದನ್ನು ನಿಲ್ಲಿಸಿ ಸರ್ವೋಚ್ಛ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು ಎಂದು ಒತ್ತಾಯಿಸಿದರು. ಈ ಪ್ರತಿಭಟನೆ ಯಾವುದೋ ಒಂದು ವರ್ಗದ ವಿರುದ್ಧ ಅಲ್ಲ, ಸರ್ವಜನಾಂಗದ ವತಿಯಿಂದ ಪ್ರತಿಭಟನೆ ನಡೆಸುತ್ತಿದ್ದು, ಎಲ್ಲಾ ಜಾತಿಯವರು ಇದರಲ್ಲಿ ಭಾಗವಹಿಸಿದ್ದಾರೆ ಎಂದು ಹೇಳಿದರು. ಕಾಲ್ನಡಿಗೆ ಜಾಥಾದಲ್ಲಿ ಎಚ್.ಎಂ.ಟಿ. ಲಿಂಗರಾಜು, ಲಕ್ಷ್ಮಿಕಾಂತರಾಜೇ ಅರಸ್, ದೇವರಾಜ ಮಾರುಕಟ್ಟೆ ವ್ಯಾಪಾರಿಗಳ ಸಂಘದ ಅಧ್ಯಕ್ಷ ಮಹದೇವು, ಶ್ರೀಕಂಠರಾಜೇ ಅರಸ್, ಭಾಸ್ಕರ್ ಸೇರಿದಂತೆ ಹಲವರು ಭಾಗವಹಿಸಿದ್ದರು.