ಚಿಂತಾಮಣಿ: ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ಅಂತರ ರಾಜ್ಯ ಬೈಕ್ ಕಳ್ಳನನ್ನು ಬಂಧಿಸಿ, ಸುಮಾರು ೮ ಲಕ್ಷ ರೂ ಬೆಲೆಬಾಳುವ ೨ ರಾಯಲ್ ಎನ್‌ಫೀಲ್ಡ್ ಮತ್ತು ೨ ಯಮಹಾ ದ್ವಿಚಕ್ರವಾಹನಗಳನ್ನು ವಶಪಡಿಸಿ ಕೊಂಡಿದ್ದಾರೆ.
ಜುಲೈ ೧ರಂದು ರಾತ್ರಿ ಸಮಯದಲ್ಲಿ ತಾಲ್ಲೂಕಿನ ಚಿನ್ನಸಂದ್ರ ಗ್ರಾಮದಲ್ಲಿ ಯಮಹಾ ದ್ವಿಚಕ್ರವಾಹನವನ್ನು ಯಾರೋ ಕಳ್ಳರು ಕದ್ದುಕೊಂಡು ಹೋಗಿದ್ದಾರೆ ಎಂದು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿತ್ತು. ಪ್ರಕರವನ್ನು ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಆರೋಪಿ ಮತ್ತು ವಾಹನವನ್ನು ಪತ್ತೆ ಮಾಡಲು ಎಸ್ಪಿ ಕುಶಾಲ್ ಚೌಕ್ಸೆ ಮಾರ್ಗದರ್ಶನದಂತೆ ಡಿವೈಎಸ್ಪಿ ಮುರಳಿಧರ್ ನೇತೃತ್ವದಲ್ಲಿ ಒಂದು ವಿಶೇಷ ಪತ್ತೆದಾರಿ ತಂಡವನ್ನು ರಚಿಸಲಾಗಿತ್ತು. ವಿಶೇಷ ಪತ್ತೆದಾರಿ ತಂಡವು ಗ್ರಾಮಾಂತರ ಮತ್ತು ನಗರ ಠಾಣೆಯಲ್ಲಿ ದಾಖಲಾಗಿರುವ ಕಳ್ಳತನದ ಪ್ರಕರಣಗಳ ಮಾಹಿತಿಯನ್ನು ಕಲೆ ಹಾಕಿ ವೈಜ್ಞಾನಿಕವಾಗಿ ತನಿಖೆಯನ್ನು ಕೈಗೊಂಡಿದ್ದರು.
ಆಂದ್ರಪ್ರದೇಶದ ಚಿತ್ತೂರು ಜಿಲ್ಲೆಯ ಮೋರುಮ್ ಪಲ್ಲಿ ನಿವಾಸಿ ಶ್ರೀಶಾಂತ್ ಎಂಬ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬೈಕ್ ಕಳ್ಳತನದ ಪ್ರಕರಣ ಪತ್ತೆಯಾಗಿದೆ. ಆರೋಪಿ ಶ್ರೀಶಾಂತ್ ಅಂತರಾಜ್ಯ ಬೈಕ್ ಕಳ್ಳನಾಗಿದ್ದು ಚಿಂತಾಮಣಿ ನಗರ ಠಾಣೆಯಲ್ಲಿ ಒಂದು, ಗ್ರಾಮಾಂತರ ಠಾಣೆಯಲ್ಲಿ ಒಂದು ಹಾಗೂ ಹೈದರಾಬಾದಿನಲ್ಲಿ ಕಳವು ಮಾಡಿರುವ ೨ ವಾಹನಗಳನ್ನು ಕಳ್ಳತನ ಮಾಡಿರುವ ಮಾಹಿತಿಯನ್ನು ನೀಡಿದ್ದಾನೆ. ಪತ್ತೆದಾರಿ ತಂಡವು ಒಟ್ಟು ೪ ಪ್ರಕರಣಗಳನ್ನು ಬೇಧಿಸಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಗ್ರಾಮಾಂತರ ಠಾಣೆಯ ಇನ್ಸ್ ಸ್ಪೆಕ್ಟರ್ ಎಸ್.ಶಿವರಾಜ್, ನಗರಠಾಣೆಯ ಇನ್ಸ್ ಸ್ಪೆಕ್ಟರ್ ವಿಜಿಕುಮಾರ್, ಸಬ್ ಇನ್ಸ್ ಸ್ಪೆಕ್ಟರ್ ಗಳಾದ ಮಮತಾ, ಪದ್ಮ, ರಮೇಶ್, ಸಿಬ್ಬಂದಿಗಳಾದ ಮಂಜುನಾಥರೆಡ್ಡಿ, ಸಂದೀಪ್ ಕುಮಾರ್, ನರೇಶ್, ವೆಂಕಟರಮಣ, ಕೃಷ್ಣಮೂರ್ತಿ, ಜಗದೀಶ್, ಲೋಕೇಶ್, ಚಾಲಕ ಶ್ರೀನಿವಾಸ್, ತಾಂತ್ರಿಕ ಸಿಬ್ಬಂದಿ ರವಿಕುಮಾರ್, ಮುನಿಕೃಷ್ಣ ತಂಡದಲ್ಲಿದ್ದರು ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.