ಸುತ್ತೂರು: ದಾಂಪತ್ಯದಲ್ಲಿ ಅನ್ಯೂನ್ಯತೆ ಬಹಳ ಮುಖ್ಯ ಎಂದು ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರು ನುಡಿದರು. ಶ್ರೀ ಸುತ್ತೂರು ಕ್ಷೇತ್ರದಲ್ಲಿ ಮಲ್ಲಿಕಾ ಮಳವಳ್ಳಿ ಮತ್ತು ಬಿ.ಎಂ. ಮಹದೇವಪ್ಪರವರ ಷಷ್ಟ್ಯಬ್ದಿ ಸಮಾರಂಭ ಹಾಗೂ ಕಾತ್ಯಾಯಿನಿ ಕಾದಂಬರಿ ಬಿಡುಗಡೆ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡುತ್ತಿದ್ದ ಪೂಜ್ಯರು ದಾಂಪತ್ಯ ಎಲ್ಲಿ ಅನ್ಯೂನ್ಯವಾಗಿರುತ್ತದೆಯೋ ಅದು ಭಗವಂತನಿಗೆ ಪ್ರಿಯವಾಗಿರುತ್ತದೆ. ದಾಂಪತ್ಯದಲ್ಲಿ ಒಬ್ಬರು ಮೌನವಾಗಿದ್ದರೆ ಆ ಜೀವನ ಸುಗಮವಾಗಿ ಸಾಗುತ್ತದೆ ಎಂದು ನುಡಿದರು.
ಮೈಸೂರು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಮ.ಗು. ಸದಾನಂದಯ್ಯರವರು ಸಮಾಜದಲ್ಲಿ ಸ್ವಾಸ್ಥ್ಯಪರವಾದ ಬದುಕನ್ನು ಕಾಣುವ ಸಲುವಾಗಿ ಪ್ರತಿಯೊಬ್ಬ ಮನುಷ್ಯನು ಸದ್ಗುಣನಾಗಬೇಕು. ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಹಿತ್ಯದ ಓದು ಬಹು ಮುಖ್ಯ. ಮಲ್ಲಿಕಾರವರ ಸಾಹಿತ್ಯ ಕೃತಿಗಳು ಸತ್ವಯುತವಾಗಿವೆ ಎಂದು ಅಭಿಪ್ರಾಯಪಟ್ಟರು. ಮುಖ್ಯ ಅತಿಥಿಗಳಾಗಿದ್ದ ಎಂ. ಎಸ್. ಶಿವಪ್ರಕಾಶ್‌ರವರು ಮಾತನಾಡಿ, ಬಿ.ಎಂ.ಮಹಾದೇವಪ್ಪನವರು ಸಮಾಜದ ಏಳಿಗೆಗಾಗಿ ಹಗಲಿರುಳು ದುಡಿದಿದ್ದಾರೆ. ಮಲ್ಲಿಕಾ ಮಳವಳ್ಳಿಯವರು ಬರೆದ ಕಾದಂಬರಿಗಳು ಸಾಮಾಜಿಕ ಕಟ್ಟುಪಾಡುಗಳಾದ ಮೂಢನಂಬಿಕೆಗಳು, ಬಾಲ್ಯವಿವಾಹ, ವರದಕ್ಷಿಣೆ ಮುಂತಾದವುಗಳ ಬಗ್ಗೆ ಜನಜಾಗೃತಿ ಮೂಡಿಸುವಂತಿವೆ ಎಂದು ತಿಳಿಸಿದರು.
ಕೃತಿ ಕುರಿತು ಮಾತನಾಡಿದ ಕವಿ ಡಾ. ಪ್ರದೀಪ್‌ಕುಮಾರ್ ಹೆಬ್ರಿರವರು, ಕಾತ್ಯಾಯಿನಿ ಕಾದಂಬರಿಯು ಸ್ತ್ರೀಶಕ್ತಿ ಚರಿತ್ರೆಯಾಗಿದೆ. ಬದುಕಿನ ನಾನಾ ಆಯಾಮಗಳು ಕಣ್ಣಿಗೆ ಕಟ್ಟುವಂತೆ ಕಾದಂಬರಿಯಲ್ಲಿ ಚಿತ್ರಿತವಾಗಿವೆ. ಗ್ರಾಮೀಣ ಪ್ರದೇಶದ ಧರ್ಮ, ಭಾಷೆಯ ಸೊಗಡನ್ನು ಎತ್ತಿ ಹಿಡಿದಿದ್ದಾರೆ. ಕಾದಂಬರಿಯ ನಾಯಕಿಯಾದ ಕಾತ್ಯಾಯಿನಿಯು ಹೆಣ್ಣು ಮಕ್ಕಳ ಏಳಿಗೆಗಾಗಿ ಶ್ರಮಿಸುತ್ತಾಳೆ. ಹೆಣ್ಣು ಮಕ್ಕಳು ವಿದ್ಯಾವಂತರಾಗುವುದರ ಜೊತೆಗೆ ಪ್ರಜ್ಞಾವಂತರಾಗಿರಬೇಕು ಎಂಬುದು ಈ ಕಾದಂಬರಿಯ ತಿರುಳು ಎಂದು ವಿಶ್ಲೇಷಿಸಿದರು. ಕೃತಿ ಬಿಡುಗಡೆ ಮಾಡಿದ ಕವಿ ಡಾ. ಎಚ್.ಎಸ್. ಮುದ್ದೇಗೌಡ ರವರು ಕಾತ್ಯಾಯಿನಿ ಕಾದಂಬರಿಯಲ್ಲಿ ಹಳ್ಳಿಯ ಬದುಕಿನ ಹೆಣ್ಣು ಮಗಳು ತನ್ನ ಆಸ್ತಿಯನ್ನು ಮಾರಿ, ಆಸ್ಪತ್ರೆಯನ್ನು ಕಟ್ಟಿಸಿ ಜನರ ಆರೋಗ್ಯ ಕಾಪಾಡಲು ಮುಂದಾಗುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಶ್ರೀ ಕೆ. ಬಿ. ಹೊನ್ನಪ್ಪರವರು ಶ್ರೀಮತಿ ಮಲ್ಲಿಕಾ ಮಳವಳ್ಳಿರವರ ಎಲ್ಲಾ ಕಾದಂಬರಿಗಳು ಸಾಮಾಜಿಕ ಕಳಕಳಿಯನ್ನು ವ್ಯಕ್ತಪಡಿಸುತ್ತವೆ. ಇವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನೃಪತುಂಗ ಪ್ರಶಸ್ತಿ ಹಾಗೂ ಇನ್ನೂ ಮುಂತಾದ ಪ್ರಶಸ್ತಿ ಲಭಿಸಿವೆ ಎಂದರು. ಮಾಗನೂರು ಮಾಮರ ಫ್ಯೂಯಲ್ ಸ್ಟೇಷನ್‌ನ ಶಿವಕುಮಾರ್‌ರವರು ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮೈಸೂರು ಎಸ್.ಜೆ.ಸಿ.ಇ ಕಾಲೇಜಿನ ಪ್ರ್ರಾಧ್ಯಾಪಕ ಪ್ರೊ. ಸದಾಶಿವಮೂರ್ತಿ. ಬಿ.ಎಂ ಸ್ವಾಗತಿಸಿದರು. ಬೆಂಗಳೂರಿನ ಕು. ಅದ್ರಿತ್ ವಂದಿಸಿದರೆ, ಮಳವಳ್ಳಿಯ ಎಪಿಪಿಯಾದ ಶ್ರೀಕಂಠಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು.