ನಂಜನಗೂಡು: ಐಸಿಎಆರ್ ಜೆಎಸ್‌ಎಸ್ ಕೃಷಿ ವಿಜ್ಞಾನ ಕೇಂದ್ರ ಸುತ್ತೂರು ವತಿಯಿಂದ ನಂಜನಗೂಡು ತಾಲೂಕಿನ ಹರತಲೆ ಗ್ರಾಮದಲ್ಲಿ ಟೊಮೆಟೊ ಬೆಳೆಯಲ್ಲಿ ನೂತನ ಬೇಸಾಯ ಕ್ರಮಗಳ ಬಗ್ಗೆ ಹಾಗೂ ಹೊಸ ತಳಿಗಳ ಬಗ್ಗೆ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಕೇಂದ್ರದ ತೋಟಗಾರಿಕಾ ವಿಜ್ಞಾನಿ ಡಾ ವಿನಯ್ ಜಿ ಎಂ ರವರು ಟೊಮೆಟೊ ಬೆಳೆಯುವ ಮುನ್ನ ರೈತರು ಅನುಸರಿಸಬೇಕಾದ ಕ್ರಮಗಳು ಅಂದರೆ ಮಣ್ಣು ಪರೀಕ್ಷೆ ಮತ್ತು ಮಣ್ಣು ಮಾದರಿ ತೆಗೆಯುವ ವಿಧಾನ, ಮಣ್ಣಿನ ಫಲವತ್ತತೆ ಹೆಚ್ಚಿಸಲು ಅನುಸರಿಸಬೇಕಾದ ಕ್ರಮಗಳು, ಹೊಲದ ಉಳುಮೆ ಮತ್ತು ಸಾವಯವ ಅಂಶಗಳನ್ನು ಮಣ್ಣಿಗೆ ಸೇರಿಸುವುದು ಬಗ್ಗೆ, ತಿಪ್ಪೆ ಗೊಬ್ಬರ ಬಳಸುವ ವಿಧಾನ ಮತ್ತು ಅದರ ಉಪಯೋಗಗಳ ಬಗ್ಗೆ ಮಾಹಿತಿ ನೀಡಿದರು, ನಂತರ ಭಾರತೀಯ ತೋಟಗರಿಕಾ ಸಂಶೋದನಾ ಸಂಸ್ಥೆ ಹೆಸರಘಟ್ಟ ಬೆಂಗಳೂರು ನಿಂದ ಬಿಡುಗಡೆ ಆದ ಟೊಮೆಟೊ ತಳಿಗಳ ಬಗ್ಗೆ ಮಾಹಿತಿ ನೀಡುತ್ತಾ, ಅರ್ಕ ಅಭೇದ ಸಂಕರಣ ತಳಿಯ ಬಗ್ಗೆ ಮಾಹಿತಿ ನೀಡಿದರು, ಈ ತಳಿಯು ಒಂದು ಸಂಕರಣ ತಲಿಯಾಗಿದ್ದು, ನಾಟಿ ಮಾಡಿದ ೬೦-೬೫ ದಿನಗಳಲ್ಲಿ ಇಳುವರಿ ಪ್ರಾರಂಭವಾಗಿ ಸುಮಾರು ೧೪೦ ದಿನಗಳವರೆಗೆ ೧೦-೧೪ ಕೊಯ್ಲು ಬರುತ್ತದೆ, ಒಳ್ಳೆ ಆಕರ್ಷಣೆ ಕಾಯಿಗಳು ಬಂದು ಸುಮಾರು ೭೦ ಟನ್ ಇಳುವರಿ ಪ್ರತಿ ಹೆಕ್ಟೇರ್ ಗೆ ನೀಡುತ್ತದೆ, ಈ ತಳಿಯ ಮುಖ್ಯ ಗುಣಗಳೆಂದರೆ ಇದು ಎಲ್ಲಾ ಕಾಲ ಗಳಲ್ಲಿ ಒಳ್ಳೆ ಇಳುವರಿ ಕೊಡುತ್ತದೆ ಮತ್ತು ಟೊಮೆಟೊ ಬೆಳೆಗೆ ಬರುವ ಮುಖ್ಯವಾದ ರೋಗಗಳನ್ನು ತಡೆಯುವ ಶಕ್ತಿ ಹೊಂದಿದೆ ಎಂದು ರೈತರಿಗೆ ತಿಳಿಸಿದರು, ನಂತರ ಕಡಿಮೆ ಖರ್ಚು ಮಾಡಿ ಹೆಚ್ಚು ಇಳುವರಿ ಪಡೆಯಲು ರೈತರು ಏರು ಮಡಿ ಮಾಡಿ ನಾಟಿ ಮಾಡಬೇಕು, ಮಲ್ಚಿಂಗ್ ಮಾಡಬೇಕು, ಹನಿ ನೀರಾವರಿ ಪದ್ಧತಿ ಉಪಯೋಗಿಸಬೇಕು, ಸಮಗ್ರ ಪೋಷಕಾಂಶಗಳ ನಿರ್ವಹಣೆ ಜೊತೆಗೆ ತರಕಾರಿ ಸಮೃದ್ಧಿ ಸಿಂಪಡಿಸಬೇಕು ಹಾಗೂ ರಸಾವರಿ ಪದ್ಧತಿ ಉಪಯೋಗಿಸಬೇಕೆಂದು ರೈತರಿಗೆ ಮಾಹಿತಿ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಸಸ್ಯ ಸಂರಕ್ಷಣೆ ವಿಜ್ಞನಿ ಡಾ ಪ್ರಸಾದ್ ವ್ಯೆ ಪಿ ಮಾತನಾಡಿ ಟೊಮೆಟೊ ಬೆಳೆಯಲ್ಲಿ ಮುಖ್ಯವಾಗಿ ಬರುವ ಮೊದಲ ಅಂಗಮಾರಿ ರೋಗ, ಕೊನೆ ಅಂಗಮಾರಿ ರೋಗ, ಸೊರಗು ರೋಗ, ಜಂತು ಹುಳು ರೋಗ, ನಂಜಾಣು ರೋಗ, ಎಲೆ ಸುರಂಗ ಕೀಟ, ಬಿಳಿ ನೊಣ, ಸಸ್ಯ ಹೇನು, ಹಣ್ಣು ಕೊರಕ ಈಗೆ ಟೊಮೆಟೊ ಬೆಳೆಗೆ ಹಾನಿ ಮಾಡುವ ಕೀಟ ಮತ್ತು ರೋಗ ಲಕ್ಷಣಗಳ ಬಗ್ಗೆ ಹಾಗೂ ಅವುಗಳ ಸಮಗ್ರ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು. ನಂತರ ಹರತಲೆ ಗ್ರಾಮದಲ್ಲಿ ಅರ್ಕ ಅಭೇದ ತಳಿ ಬೆಳೆದ ರೈತರಾದ ರಾಜು ರವರು ಮಾತನಾಡಿ ಅವರ ಅನುಭವವನ್ನು ರೈತರೊಂದಿಗೆ ಹಂಚಿಕೊಂಡರು. ಈ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು ೩೦ ಕ್ಕು ಹೆಚ್ಚು ರೈತರು ಭಾಗವಹಿಸಿ ಉಪಯೋಗ ಪಡೆದು ಕೊಂಡರು.