ದಕ್ಷಿಣಕನ್ನಡ : ಧರ್ಮಸ್ಥಳ ಗ್ರಾಮದ ವಿವಿಧೆಡೆ ತಾನು ಹಲವು ಮೃತದೇಹಗಳನ್ನು ಹೂತು ಹಾಕಿರುವುದಾಗಿ ಅನಾಮಧೇಯ ವ್ಯಕ್ತಿಯೋರ್ವ ನೀಡಿದ ದೂರು ಆಧರಿಸಿ, ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ತನಿಖೆ ನಡೆಸುತ್ತಿದೆ. ದೂರುದಾರ ಗುರುತಿಸಿರುವ ಸ್ಥಳಗಳನ್ನು ಎಸ್‌ಐಟಿ, ಕಾರ್ಮಿಕರ ಮೂಲಕ ಅಗೆಯುವ ಕೆಲಸ ಶುರು ಮಾಡಿಸಿದಾಗ ಮಂಗಳವಾರ ಸಂಜೆಯವರೆಗೆ ಅಗೆದರೂ ಯಾವುದೇ ಅಸ್ಥಿಪಂಜರದ ಕುರುಹು ಸಿಗದೇ ಇದ್ದುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತಿಯಲ್ಲಿ ಇಂದು ಏಕ ಕಾಲದಲ್ಲಿ 3 ಕಡೆ ಭೂಮಿ ಅಗೆದು ಅಸ್ತಿಪಂಜರಗಳ ಕುರುಹು ಪತ್ತೆ ಕುರಿತು ತೀರ್ಮಾನಿಸಲಾಗಿದ್ದು ಏಕಕಾಲದಲ್ಲಿ ಮೂರು ಕಡೆ ಅಗೆಯಲು ನಿರ್ಧರಿಸಲಾಗಿದೆ. ಸರ್ಕಾರಿ ಅಧಿಕಾರಿಗಳು ಮೂವರು ತಹಸೀಲ್ದಾರ್ ನೇತೃತ್ವದಲ್ಲಿ ಏಕಕಾಲದಲ್ಲಿ ಅಗೆಯಲು ನಿರ್ಧರಿಸಲಾಗಿದ್ದು ಹಾಗಾಗಿ ಎಸ್ಐಟಿ ತಂಡ ಮೂರು ತಂಡಗಳನ್ನು ರಚನೆ ಮಾಡಿದೆ.
ನಿನ್ನೆ ದೂರುದಾರ ಮೃತದೇಹ ಹೂತಿದ್ದೇನೆ ಎಂದು ತೋರಿಸಿದ 13 ನಿಗದಿತ ಸ್ಥಳಗಳಿಗೆ ನಂಬರ್ ಅಳವಡಿಸಿ ಪ್ರವೇಶ ನಿರ್ಬಂಧಿಸಿ ಸೂಕ್ತ ಭದ್ರತೆಯನ್ನು ಕಲ್ಪಿಸಿತ್ತು. ಮಂಗಳವಾರ ಬೆಳಗ್ಗೆ ಎಸ್ಐಟಿ ತಂಡದೊಂದಿಗೆ ವಿವಿಧ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಮಾರ್ಕ್ ಮಾಡಿದ ಒಂದನೇ ನಂಬರ್ ನ ಜಾಗವನ್ನು ಕಾರ್ಮಿಕರ ಮೂಲಕ ಅಗೆಯುವ ಪ್ರಕ್ರಿಯೆ ಪ್ರಾರಂಭಿಸಲಾಯಿತು.
ಅದರೆ ವಿಪರೀತ ಮಳೆ ಹಾಗೂ ಭೂಮಿಯಿಂದ ಬರುತ್ತಿರುವ ನೀರಿನಿಂದಾಗಿ ಅಗೆಯಲು ಕಷ್ಟಸಾಧ್ಯವಾದಾಗ ಹಿಟಾಚಿ ಯಂತ್ರದ ಮೂಲಕ ಜಾಗ ಅಗೆಯುವ ಕೆಲಸ ನಡೆಯಿತು. ಅದರೆ ಸಂಜೆಯವರೆಗೆ ಅಗೆದು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಬುಧವಾರಕ್ಕೆ ಮುಂದೂಡಲಾಗಿದೆ. ಕಾರ್ಯಾಚರಣೆಯ ವೇಳೆ ಡಾಗ್ ಸ್ಕ್ಯಾಡ್ ಸೇರಿದಂತೆ ಪುತ್ತೂರು ಎ.ಸಿ. ಎಸ್ಐಟಿ, ಅಧಿಕಾರಿಗಳು, ವಿಧಿವಿಜ್ಞಾನ ವಿಭಾಗದ ಅಧಿಕಾರಿಗಳು, ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
ಎಸ್ಐಟಿ ತನಿಖಾಧಿಕಾರಿ ಅನುಚೇತ್, ಆಂತರಿಕ ಭದ್ರತಾ ವಿಭಾಗದ ಎಸ್ಪಿ ಜಿತೇಂದ್ರ ಕುಮಾರ್ ದಯಾಮ ಹಾಗೂ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮಂಗಳೂರು ವಲಯದ ಎಸ್ಪಿ ಸಿ.ಎ.ಸೈಮನ್, ಪುತ್ತೂರು ಎ.ಸಿ ಸ್ಟೆಲ್ಲಾ ವರ್ಗೀಸ್ ಹಾಗೂ ಮತ್ತಿತರ ಅಧಿಕಾರಿಗಳು ಸ್ಥಳದಲ್ಲಿ ಹಾಜರಿದ್ದಾರೆ.