17ನೇ ಆವೃತ್ತಿಯ ಐಪಿಎಲ್ಗೆ ದಿನಗಣನೆ ಶುರುವಾಗಿದೆ. ಹೀಗಾಗಿ ಎಲ್ಲಾ ತಂಡಗಳು ಅಂತಿಮ ಸಿದ್ಧತೆಯತ್ತ ದೃಷ್ಟಿ ನೆಟ್ಟಿವೆ. ಈ ನಡುವೆ ಲೀಗ್ನ ಅತ್ಯಂತ ಯಶಸ್ವಿ ತಂಡ ಮುಂಬೈ ಇಂಡಿಯನ್ಸ್ ಮುಂಬರುವ ಲೀಗ್ಗೆ ಹೊಸ ಜೆರ್ಸಿಯನ್ನುಅನಾವರಣಗೊಳಿಸಿದೆ.
ವಾಸ್ತವವಾಗಿ ಟೂರ್ನಿ ಆರಂಭಕ್ಕೂ ಮುನ್ನವೆ ಸಾಕಷ್ಟು ವದಂತಿಗಳಿಂದ ಐಪಿಎಲ್ ಲೋಕದಲ್ಲಿ ಸುದ್ದಿಯಾಗಿರುವ ಮುಂಬೈ ಫ್ರಾಂಚೈಸಿ, ತನ್ನ ತಂಡದ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾರನ್ನು ನಾಯಕತ್ವದಿಂದ ಕೆಳಗಿಳಿಸಿ ತಂಡದ ಮಾಜಿ ಆಟಗಾರ ಹಾರ್ದಿಕ್ ಪಾಂಡ್ಯಗೆ ಈ ಅಧಿಕಾರ ನೀಡಿತ್ತು. ಆ ಬಳಿಕ ರೋಹಿತ್ ಶರ್ಮಾ ಹಾಗೂ ಮುಂಬೈ ನಡುವೆ ಸಂಬಂಧ ಅಳಸಿದೆ ಎಂಬ ಮಾತು ಕೇಳಿಬಂದಿತ್ತು. ಅದಕ್ಕೆಲ್ಲ ಸೊಪ್ಪು ಹಾಕದ ಫ್ರಾಂಚೈಸಿ ಇದೀಗ ಉಳಿದ ತಂಡಗಳಿಗೂ ಮೊದಲು ತನ್ನ ತಂಡದ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಿದೆ.
ಹೊಸ ಜೆರ್ಸಿಯಲ್ಲಿ ಏನಿದೆ?
ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ತಮ್ಮ ಹೊಸ ಕಿಟ್ ತಯಾರಕರಾದ ಸ್ಕೆಚರ್ಸ್‌ನ ಸಹಯೋಗದೊಂದಿಗೆ ಮುಂಬರುವ ಐಪಿಎಲ್ಗೆ ತಮ್ಮ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಖ್ಯಾತ ವಿನ್ಯಾಸಕಿ ಮೋನಿಶಾ ಜೈಸಿಂಗ್ ಅವರು ಅಂಭಾನಿ ತಂಡದ ನೂತನ ಜೆರ್ಸಿಯನ್ನು ವಿನ್ಯಾಸಗೊಳಿಸಿರುವುದು ವಿಶೇಷವಾಗಿದೆ. ಹಳೆಯ ಜೆರ್ಸಿಗೂ ಹಾಗೂ ಈಗ ಬಿಡುಗಡೆಯಾಗಿರುವ ಹೊಸ ಜೆರ್ಸಿಗು ಹೆಚ್ಚು ವ್ಯತ್ಯಾಸಗಳಿಲ್ಲ. ನೂತನ ಜೆರ್ಸಿಯ ಮಧ್ಯ ಭಾಗದಲ್ಲಿ ಸಾಮಾನ್ಯ ರಾಯಲ್ ನೀಲಿ ಬಣ್ಣವನ್ನು ಹೊಂದಿದ್ದು, ಭುಜ ಮತ್ತು ಶರ್ಟ್‌ನ ಬದಿಗಳಲ್ಲಿ ಚಿನ್ನದ ಪಟ್ಟೆಗಳನ್ನು ಹೊಂದಿದೆ. ಹಾಗೆಯೇ ಜೆರ್ಸಿಯ ತುಂಬ ಎಮ್ ಅಕ್ಷರವನ್ನು ಕಾಣಬಹುದಾಗಿದೆ. ಉಳಿದಂತೆ ಜೆರ್ಸಿಯಲ್ಲಿ ಅಂತಹ ದೊಡ್ಡ ಬದಲಾವಣೆಗಳಾಗಿಲ್ಲ.
ಇನ್ನು ನೂತನ ಜೆರ್ಸಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಮುಂಬೈ ಫ್ರಾಂಚೈಸಿಯ ವಕ್ತಾರರು, ನಮ್ಮ ಆಟಗಾರರು ಐಕಾನಿಕ್ ನೀಲಿ ಮತ್ತು ಚಿನ್ನದ ಬಣ್ಣದ ಜೆರ್ಸಿಯನ್ನು ಧರಿಸುವುದರಿಂದ ನಮ್ಮ ತಂಡದ ಭರವಸೆ ಮತ್ತು ಕನಸುಗಳನ್ನು ತಮ್ಮೊಂದಿಗೆ ಕೊಂಡೊಯ್ಯುತ್ತಾರೆ. ಇದು ‘ಮುಂಬೈ ಮೇರಿ ಜಾನ್’ ಸ್ಫೂರ್ತಿಯಿಂದ ಉತ್ತೇಜಿಸಲ್ಪಟ್ಟಿದೆ. ಜರ್ಸಿಯು ಗೌರವದ ಬ್ಯಾಡ್ಜ್ ಆಗಿದೆ, ಅದನ್ನು ಧರಿಸುವ ಎಲ್ಲರಿಗೂ ಹೆಮ್ಮೆಯ ಸಂಕೇತವಾಗಿದೆ ಎಂದಿದ್ದಾರೆ.