ಮೈಸೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಯೇ ಐಪಿಎಲ್ ಉದ್ಘಾಟನಾ ಪಂದ್ಯ ನಡೆಸಲು ಸರ್ಕಾರದ ಹಸಿರು ನಿಶಾನೆ ಅಗತ್ಯವಿತ್ತು. ಮೌಖಿಕ ಒಪ್ಪಿಗೆಯನ್ನು ರಾಜ್ಯ ಸರ್ಕಾರ ಈಗಾಗಲೇ ನೀಡಿದ್ದು, ಶೀಘ್ರದಲ್ಲಿಯೇ ಲಿಖಿತ ಅನುಮತಿ ದೊರೆಯಲಿದೆ ಎಂದು ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ತಿಳಿಸಿದ್ದಾರೆ.
ಈ ವಿಚಾರವಾಗಿ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ವಿಧಾನಮಂಡಲ ಅಧಿವೇಶನದ ನಂತರ ಗೃಹ ಸಚಿವ ಜಿ.ಪರಮೇಶ್ವರ್ ಅವರೊಂದಿಗೆ ಚರ್ಚಿಸಲಾಗುವುದು ಎಂದು ಹೇಳಿದರು.
ಈ ವೇಳೆ ಆರ್‌ಸಿಬಿ ಚಾಂಪಿಯನ್ ಆಗಿರುವುದರಿಂದ ತವರು ನೆಲದಲ್ಲಿಯೇ ಉದ್ಘಾಟನಾ ಪಂದ್ಯ ನಡೆಯಬೇಕು. ಆರ್‌ಸಿಬಿ ಸಂಭ್ರಮಾಚರಣೆಯಲ್ಲಿ ಉಂಟಾದ ಕಾಲ್ತುಳಿತ ಪ್ರಕರಣದಿಂದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಂತರರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ಮತ್ತೆ ಆಯೋಜಿಸುವ ವಾತಾವರಣ ನಿರ್ಮಿಸುವುದು ಸುಲಭವಿರಲಿಲ್ಲ ಎಂದರು.
ಇದಕ್ಕೆ ರಾಜ್ಯ ಸರ್ಕಾರದ ಬೆಂಬಲ ಅಗತ್ಯವಿತ್ತು. ಈ ಬಗ್ಗೆ ಬಿಸಿಸಿಐ ಜೊತೆಯೂ ಈಗಾಗಲೇ ಮಾತನಾಡಿದ್ದು, ಅಗತ್ಯ ಸಿದ್ಧತಾ ಕ್ರಮಗಳನ್ನು ತೆಗೆದುಕೊಂಡು ಉದ್ಘಾಟನಾ ಪಂದ್ಯವನ್ನು ಇಲ್ಲೇ ನಡೆಸಲಾಗುವುದು ಹಾಗೂ ಹೊಸ ಕೆಎಸ್‌ಸಿಎ ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡ ನಂತರ, ಎಲ್ಲಾ ಸುರಕ್ಷತೆ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದೊಂದಿಗೆ ಚರ್ಚೆ ನಡೆಸಲಾಯಿತು. ಈ ನಿಟ್ಟಿನಲ್ಲಿ ಹಸಿರು ನಿಶಾನೆ ತೋರಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಪ್ರಸಾದ್ ಹೇಳಿದರು.



