ಜೆರುಸೆಲಂ: ಕಳೆದ ಏಳು ತಿಂಗಳ ಹಿಂದೆ ಪ್ರಾರಂಭವಾದ ಹಮಾಸ್ ಮತ್ತು ಇಸ್ರೇಲ್ ನಡುವಿನ ಯುದ್ಧ ಇನ್ನೂ ನಿಲ್ಲದ ಬೆನ್ನಲ್ಲೆ ಇರಾನ್ ಸೇನೆಯು ಇಸ್ರೇಲ್ ಮೇಲೆ ಭಾರಿ ಪ್ರಮಾಣದ ಡ್ರೋನ್ ದಾಳಿ ನಡೆಸಿದೆ.
೧೦೦ಕ್ಕೂ ಡ್ರೋನ್‌ಗಳು ಇರಾನ್‌ನಿಂದ ಇಸ್ರೇಲ್‌ನತ್ತ ಹಾರುತ್ತಿರುವುದು ಕಂಡುಬಂದಿದೆ ಎಂದು ಇರಾಕ್‌ನ ಭದ್ರತಾ ಮೂಲಗಳು ಹೇಳಿದ್ದು, ಡ್ರೋನ್‌ಗಳು ಗುರಿ ತಲುಪಲು ಹಲವು ಗಂಟೆಗಳು ಬೇಕು ಎಂದು ಇಸ್ರೇಲ್ ಮಿಲಿಟರಿ ಹೇಳಿದೆ ಎಂದು ವರದಿ ತಿಳಿಸಿದೆ. ಏ.೧ರಂದು ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್ ರಾಯಭಾರ ಕಚೇರಿ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್‌ನ ರೆವಲ್ಯೂಷನರಿ ಗಾರ್ಡ್‌ನ ಇಬ್ಬರು ಬ್ರಿಗೇಡಿಯರ್ ಜನರಲ್ ಸೇರಿ ಏಳು ಸೇನಾಧಿಕಾರಿಗಳು ಹತರಾಗಿದ್ದರು. ಈ ದಾಳಿಗಾಗಿ ಇಸ್ರೇಲ್ ಅನ್ನು ಶಿಕ್ಷಿಸದೆ ಬಿಡೆವು ಎಂದು ಇರಾನ್ ಪರಮೋಚ್ಚ ನಾಯಕ ಅಯಾತ್ ಉಲ್ಲಾ ಅಲಿ ಖಮೇನಿ ಪ್ರತಿಜ್ಞೆ ಗೈದಿದ್ದರು. ಆದರೆ, ಇಸ್ರೇಲ್ ಈ ವೈಮಾನಿಕ ದಾಳಿಯ ಹೊಣೆ ಹೊತ್ತುಕೊಂಡಿಲ್ಲ.
ಇರಾನ್ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್ `ಇಸ್ರೇಲ್ ರಕ್ಷಣೆಗೆ ನಾವು ಬದ್ಧರಾಗಿದ್ದೇವೆ. ಇಸ್ರೇಲ್‌ಗೆ ಬೇಕಾದ ಎಲ್ಲ ನೆರವನ್ನು ನಾವು ನೀಡಲಿದ್ದೇವೆ. ಯುದ್ಧಕ್ಕೆ ಇಳಿದರೆ ಇರಾನ್ ಯಶ ಕಾಣುವುದಿಲ್ಲ’ ಎಂದು ಹೇಳಿದ್ದರು.