ವಾಷಿಂಗ್ಟನ್: “ಈಗಲಾದರೂ ಇರಾನ್ ಶಾಂತಿ ಸ್ಥಾಪಿಸಬೇಕು. ಇಲ್ಲವಾದರೆ ಭವಿಷ್ಯದಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ,” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಭಾನುವಾರ ನಸುಕಿನಲ್ಲಿ ಇರಾನ್ ಮೇಲಿನ ಅಮೆರಿಕದ ವೈಮಾನಿಕ ದಾಳಿಯ ನಂತರ ಶ್ವೇತಭವನದಲ್ಲಿ ರಾಷ್ಟ್ರವನ್ನುದ್ದೇಶಿಸಿ ಅವರು ಮಾತನಾಡಿದರು.
“ಇರಾನ್ ಇಸ್ರೇಲ್ ವಿರುದ್ಧ ಯುದ್ಧ ನಿಲ್ಲಿಸಿ ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಬೇಕು. ಶನಿವಾರ ರಾತ್ರಿ ನಡೆದ ದಾಳಿಯು ನಿರ್ದಿಷ್ಟ ಗುರಿಯನ್ನು ಸಾಧಿಸಿತು. ನಮ್ಮ ಉದ್ದೇಶ ಇರಾನ್ನ ಪರಮಾಣು ಸ್ಥಾವರಗಳನ್ನು ನಾಶಮಾಡುವುದು ಮತ್ತು ಇಸ್ರೇಲ್ಗೆ ಇರಾನ್ ಒಡ್ಡಿದ ಭಯಾನಕ ಬೆದರಿಕೆಯನ್ನು ನಿವಾರಣೆ ಮಾಡುವುದು,” ಎಂದು ಟ್ರಂಪ್ ಹೇಳಿದರು.
ಫೋರ್ಡೊ, ನಟಾಂಜ್ ಮತ್ತು ಇಸ್ಫಹಾನ್ ಎಂಬ ಪ್ರಮುಖ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಿ, ಅವುಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ. ಈ ದಾಳಿಯಲ್ಲಿ ಸುಮಾರು 30,000 ಪೌಂಡ್ಗಳಷ್ಟು ಬಂಕರ್ ಬಸ್ಟರ್ ಬಾಂಬ್ಗಳನ್ನು ಬಳಸಲಾಗಿದೆ. “ಇದು ಜಗತ್ತಿಗೆ ಬಲವಾದ ಸಂದೇಶ,” ಎಂದು ಅವರು ಹೇಳಿದರು. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನೀಡಿದ ಸಹಕಾರಕ್ಕೂ ಟ್ರಂಪ್ ಕೃತಜ್ಞತೆ ಸಲ್ಲಿಸಿದರು.
ಕಳೆದ ನಾಲ್ಕು ದಶಕಗಳಿಂದ ಇರಾನ್ ಇಸ್ರೇಲ್ ಹಾಗೂ ಅಮೆರಿಕದ ವಿರುದ್ಧ ಆಕ್ರಮಣಶೀಲ ನಿಲುವು ತಾಳಿದ್ದು, ಅನೇಕ ಅಮೆರಿಕ ನಾಗರಿಕರು ಮತ್ತು ಸೇನಾಪಡೆಯ ಸದಸ್ಯರು ಬಲಿಯಾಗಿದ್ದಾರೆ. ಟ್ರಂಪ್ ಅವರು, “ಈ ಬಾರಿಗೆ ಶಾಶ್ವತ ಯುದ್ಧ ಬೇಡವೆಂದು ನಾವು ಹೇಳಿದ್ದರೂ, ಇಂತಹ ಧ್ವಂಸಕಾರಿ ಶಕ್ತಿಗೆ ಪ್ರತಿಕ್ರಿಯೆ ಅನಿವಾರ್ಯ,” ಎಂದು ತಿಳಿಸಿದರು.
ಶ್ವೇತಭವನದ ಪರಿಸ್ಥಿತಿ ಗಂಭೀರವಾಗಿದ್ದು, ದಾಳಿಯ ವೇಳೆ ನಡೆದ ಸಭೆಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.