ಇರಾನ್ನಲ್ಲಿ ಆಡಳಿತ ವಿರೋಧಿ ಪ್ರತಿಭಟನೆಗಳು ಮುಂದುವರಿದಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಇರಾನ್ನ ಪ್ರತಿಭಟನಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಅಮೆರಿಕನ್ನರಿಗೆ ಇರಾನ್ ತೊರೆಯುವಂತೆ ಟ್ರಂಪ್ ಸರ್ಕಾರ ಸೂಚಿಸಿದೆ ಎನ್ನಲಾಗಿದ್ದು, ರಾಯಿಟರ್ಸ್ ಪ್ರಕಾರ, ಅಶಾಂತಿಯ ಸಮಯದಲ್ಲಿ ಸುಮಾರು 2,000 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನಿನ ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರ ಮತ್ತು ಮರಣದಂಡನೆಗಳ ವಿರುದ್ಧ ಡೊನಾಲ್ಡ್ ಟ್ರಂಪ್ ಇರಾನ್ಗೆ ಎಚ್ಚರಿಕೆ ನೀಡಿದ ನಂತರ, ಇರಾನ್ನ ಹಿರಿಯ ಅಧಿಕಾರಿ ಅಲಿ ಲಾರಿಜಾನಿ, ಟ್ರಂಪ್ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇರಾನಿನ ಜನರನ್ನು ಕೊಂದಿದ್ದಾರೆ ಎಂದು ಆರೋಪಿಸಿದ್ದರು. ಇರಾನಿನ ಸರ್ಕಾರವು ಅವರಿಗೆ ಉತ್ತಮ ಜೀವನವನ್ನು ಒದಗಿಸುವಲ್ಲಿ ವಿಫಲವಾಗಿರುವುದರಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಅಮೆರಿಕ ತಿರುಗೇಟು ನೀಡಿದ್ದು, ಇರಾನಿನ ಆಡಳಿತವು ದಶಕಗಳಿಂದ ಆರ್ಥಿಕತೆ, ಕೃಷಿ, ನೀರು ಸರಬರಾಜು ಮತ್ತು ವಿದ್ಯುತ್ನಂತಹ ಪ್ರಮುಖ ಕ್ಷೇತ್ರಗಳನ್ನು ನಿರ್ಲಕ್ಷಿಸಿದೆ ಎಂದು ಅದು ಆರೋಪಿಸಿದೆ.
ಬದಲಾಗಿ, ಸರ್ಕಾರವು ದೇಶದ ಸಂಪತ್ತನ್ನು ಭಯೋತ್ಪಾದಕ ಪ್ರಾಕ್ಸಿಗಳು ಮತ್ತು ಪರಮಾಣು ಶಸ್ತ್ರಾಸ್ತ್ರಗಳ ಸಂಶೋಧನೆಗೆ ಖರ್ಚು ಮಾಡಿದೆ ಎಂದು ಅಮೆರಿಕ ಆರೋಪಿಸಿದ್ದು, ಇರಾನ್ ಜನರಿಗೆ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗುತ್ತಿದೆ. ಜೀವನ ಪರಿಸ್ಥಿತಿ ಹದಗೆಡುತ್ತಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಪ್ರತಿಭಟನಾಕಾರರು ಉತ್ತಮ ಜೀವನವನ್ನು ಬಯಸುತ್ತಾರೆ ಮತ್ತು ಅರ್ಹರು ಎಂದು ಒತ್ತಿ ಹೇಳಿದ ವಿದೇಶಾಂಗ ಇಲಾಖೆ, ಅವರ ಬೇಡಿಕೆಗಳು ನ್ಯಾಯಸಮ್ಮತವಾಗಿವೆ ಮತ್ತು ಪ್ರಸ್ತುತ ಆಡಳಿತದ ವಿರುದ್ಧ ದೀರ್ಘಕಾಲದ ಕುಂದುಕೊರತೆಗಳಲ್ಲಿ ಬೇರೂರಿವೆ ಎಂದು ಹೇಳಿದೆ.
ಇನ್ನೂ ಖಮೇನಿ ಸರ್ಕಾರವು ಕಠಿಣ ಕ್ರಮಗಳ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕುತ್ತಿದ್ದು, ಇದೇ ಕಾರಣಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ ಎಂದೂ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿರುವ ಈ ಹೆಸರು ಹೇಳಲಿಚ್ಚಿಸದ ಈ ಉನ್ನತ ಅಧಿಕಾರಿ, ಪ್ರತಿಭಟನಾಕಾರರು ಮತ್ತು ಭದ್ರತಾ ಸಿಬ್ಬಂದಿ ಸಾವಿನ ಹಿಂದೆ ಭಯೋತ್ಪಾದಕರ ಕೈವಾಡ ಇದೆ ಎಂದು ತಿಳಿಸಿದ್ದಾರೆ.



