ವಿನಯ್ ದೊಡ್ಡಕೊಪ್ಪಲು
ಹೊಸೂರು: ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಬಹುತೇಕ ಎಲ್ಲಾ ನಾಲೆಗಳಿಗೂ ನೀರು ಬಿಟ್ಟ ನೀರಾವರಿ ಇಲಾಖೆ ಕಟ್ಟೆಪುರ ಬಲದಂಡಾ ನಾಲೆಗೆ ನೀರು ಹರಿಸದೇ ಮೌನಕ್ಕೆ ಶರಣಾಗಿದ್ದು, ಭತ್ತ ಬೆಳೆಯಲು ತುದಿಗಾಲಲ್ಲಿ ನಿಂತಿರುವ ಸಾವಿರಾರು ರೈತರು ನಾಲೆಯ ನೀರಿಗಾಗಿ ಎದುರು ನೋಡುವಂತೆ ಆಗಿದೆ.
ಈ ನಾಲೆಯು ಅರಕಲಗೂಡಿನ ಕಟ್ಟೆಪುರ ಗ್ರಾಮದ ಕಾವೇರಿ ನದಿಯ ಅಣೆಯ ಅಣೆಕಟ್ಟೆಯಿಂದ ಈ ನಾಲೆಯು ಆರಂಭವಾಗಿ ಕೆ.ಆರ್.ನಗರ ತಾಲೂಕಿನ ಕೆಸ್ತೂರು ಗೇಟ್ ವರೆಗೆ ಭತ್ತ ಬೆಳೆಯಲು ನೀರಾವರಿ ಸೌಲಭ್ಯವನ್ನು ಕಲ್ಪಿಸಿದೆ ಅದರೆ ನಾಲೆಗೆ ನೀರು ಹರಿಸದ ಪರಿಣಾಮ ಭತ್ತದ ಬೆಳೆಗಾರರ ಕೆಂಗಣ್ಣಿಗೆ ಗುರಿಯಾಗುತ್ತಿದೆ.
ಕ್ಷೇತ್ರದಲ್ಲಿ ಈ ನಾಲೆಯ ನೀರನ್ನು ಬಂಡಹಳ್ಳಿ, ಕೊಳೂರು, ಕಗ್ಗಳ, ಹಾಡ್ಯ, ಸಕ್ಕರೆ, ದಿಡ್ಡಹಳ್ಳಿ, ಹೊಸೂರು, ಹಳಿಯೂರು, ಸಾಲೆಕೊಪ್ಪಲು, ಚುಂಚನಕಟ್ಟೆ, ಕೆಸ್ತೂರು ಕೊಪ್ಪಲು ಗ್ರಾಮದ ವ್ಯಾಪ್ತಿಯ ಜಮೀನಿಗೆ ಬಳಕೆಯಾಗುತ್ತಿದ್ದು ಇದೀಗ ನೀರು ನಾಲೆಯಲ್ಲಿ ನೀರು ಹರಿಸದ ಪರಿಣಾಮವಾಗಿ ರೈತರು ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ.
ಈಗಾಗಲೇ ಕ್ಷೇತ್ರದಲ್ಲಿ ಹರಿಯುವ ಕಾವೇರಿ ನದಿಯಿಂದ ಚಾಮರಾಜ, ಕಟ್ಟೆಪುರ, ಮಿರ್ಲೇಶ್ರೇಣಿ, ಮತ್ತು ಹಾರಂಗಿ ಅಣೆಕಟ್ಟೆಯಿಂದ ಕೃಷ್ಣರಾಜನಗರ ಉಪನಾಲೆಗೆ ನೀರು ಬಿಡುಗಡೆಯಾದ ಹಿನ್ನಲೆಯಲ್ಲಿ ಈ ಭಾಗದ ರೈತ ಭತ್ತ ಸೇರಿದಂತೆ ಇನ್ನಿತರ ಬೆಳೆಯನ್ನು ಬೆಳೆಯಲು ಅರಂಭಿಸಿದ್ದಾರೆ ಅದರೆ ನೀರು ಬಿಡುಗಡೆ ಯಾಗದೇ ಕಟ್ಟೆಪುರ ಭಾಗದ ರೈತರು ಕೈ ಕಟ್ಟಿ ಕೂರುವಂತೆ ಆಗಿದೆ.
ಆಗಸ್ಟ್ ಅಂತ್ಯದ ವೇಳೆಗೆ ಭತ್ತದ ನಾಟಿ ಕಾರ್ಯ ಸಂಪೂರ್ಣವಾಗಿ ಮುಗಿಸಬೇಕಿದ್ದು ಒಂದು ವೇಳೆ ತಡವಾದರೆ ನವೆಂಬರ್ ತಿಂಗಳ ಚಳಿಗಾಲಕ್ಕೆ ಭತ್ತ ಕಾಳು ಕಟ್ಟಲು ವಿಫಲವಾಗಿ ಸೂಕ್ತ ಇಳುವರಿ ಬಾರದೇ ನಷ್ಟವಾಗುವ ಸಂಭವವೇ ಹೆಚ್ಚಾಗಿದ್ದು, ಇದರಿಂದ ಈ ಭಾರಿ ಇನ್ನು ಕಟ್ಟೆಪುರ ನಾಲೆಗೆ ನೀರು ಬಾರದೇ ನೀರಿಗಾಗಿ ರೈತರು ನಿತ್ಯ ಜಾತಕ ಪಕ್ಷಿಗಳಂತೆ ಎದುರು ನೋಡುವಂತೆ ಆಗಿದೆ.
ಈ ಬಗ್ಗೆ ನೀರಾವರಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದರೇ ಬಂಡಹಳ್ಳಿ ಸಮೀಪ ಕೆರೆಯ ಬಳಿ ಸೇತುವೆ ಹಾಗೂ ಕೋಡಿ ನೀರು ಹರಿಯುವ ವಿಭಜಕದ ತಡೆಗೋಡೆ ಕಾಮಗಾರಿ ನಡೆಯುತ್ತಿದ್ದು, ಇದು ಮುಗಿದ ನಂತರ ನಾಲೆಗೆ ನೀರು ಹರಿಸುವುದಾಗಿ ಸಿದ್ದ ಉತ್ತರವನ್ನು ನೀಡಿದ್ದು, ಅಧಿಕಾರಿಗಳ ಬೇಜಬ್ದಾರಿಯಿಂದ ರೈತರ ಕೈಗೆ ಭತ್ತದ ಬೆಳೆ ಈ ಬಾರಿ ಸಿಗದಂತೆ ಆಗುವ ಅನುಮಾನ ವ್ಯಕ್ತವಾಗುತ್ತಿದೆ.
ನಾಲೆಗಳಿಗೆ ನೀರು ಹರಿಸುವ ಒಂದು ತಿಂಗಳು ಮುಂಚಿತವಾಗಿ ನಾಲೆಯ ಪರಿಶೀಲನೆ ಮಾಡಿ ಹೂಳು ತೆಗೆಸಿ,ಯಾವುದೇ ಕಾಮಗಾರಿಗಳು ಅವಶ್ಯಕವಾಗಿದ್ದರೆ ತಕ್ಷಣ ಮುಗಿಸಿ ನಾಲೆಯಲ್ಲಿ ನೀರು ಹರಿಸಬೇಕಾದ ನೀರಾವರಿ ಇಲಾಖೆ ಅಧಿಕಾರಿಗಳು ಇದೀಗ ಕಾಮಗಾರಿ ಕೈಗೆತ್ತಿಕೊಂಡಿರುವುದು ಈ ಕಟ್ಟೆಪುರ ನಾಲಾ ವ್ಯಾಪ್ತಿಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ